ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣಾ ಕಣದಿಂದ ಬಿಜೆಪಿಯ ನಾಲ್ವರು ಹಿರಿಯ ನಾಯಕರು ದೂರ ಸರಿದಿದ್ದಾರೆ. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಗುಜರಾತ್, ಹಿರಿಯ ಶಾಸಕ ಭೂಪೇಂದ್ರಸಿಂಹ ಚುಡಸಾಮ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ.
ನಾನು 5 ವರ್ಷಗಳ ಕಾಲ ಎಲ್ಲರ ಸಹಕಾರದಿಂದ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಈ ಚುನಾವಣೆಯಲ್ಲಿ ಹೊಸ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಬೇಕು. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಪತ್ರ ಕಳುಹಿಸಿದ್ದೇನೆ ಮತ್ತು ದೆಹಲಿ ನಾಯುಕರಿಗೆ ತಿಳಿಸಿದ್ದೇನೆ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.
ಬಿಜೆಪಿಯ ಹಿರಿಯ ಶಾಸಕ ಭೂಪೇಂದ್ರಸಿಂಹ ಚುಡಸಾಮ ಸಹ, ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ನನ್ನ ನಿರ್ಧಾರವನ್ನು ಪಕ್ಷಕ್ಕೆ ತಿಳಿಸಿದ್ದೇನೆ. ಇತರ ಕಾರ್ಯಕರ್ತರಿಗೂ ಅವಕಾಶ ಸಿಗಬೇಕು ಎಂದು ನಾನು ನಿರ್ಧರಿಸಿದ್ದೇನೆ. ನಾನು ಇಲ್ಲಿಯವರೆಗೆ ಒಂಬತ್ತು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಇಷ್ಟು ಬಾರಿ ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ನಾನು ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಶೀಘ್ರದಲ್ಲೇ ದೆಹಲಿಯಲ್ಲಿ ಗುಜರಾತ್ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ಗುಜರಾತ್ ಬಿಜೆಪಿಯ ಎಲ್ಲ ಹಿರಿಯ ನಾಯಕರು ಭಾಗವಹಿಸುವ ಈ ಸಭೆಯಲ್ಲಿ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಲಾಗುವುದು.
ಗುಜರಾತ್‌ನ 89 ಮತ್ತು 93 ವಿಧಾನಸಭಾ ಕ್ಷೇತ್ರಗಳಿಗೆ ಕ್ರಮವಾಗಿ ಡಿಸೆಂಬರ್ 1 ಮತ್ತು 5ರಂದು ಮತದಾನ ನಡೆಯಲಿದೆ. ಎರಡೂ ಹಂತದ ಮತಗಳ ಎಣಿಕೆ ಡಿಸೆಂಬರ್ 8ರಂದು ನಡೆಯಲಿದೆ. ಬಿಜೆಪಿಯು ಚುನಾವಣೆಯಲ್ಲಿ ಗೆದ್ದು ಆರನೇ ಬಾರಿಗೆ ಅಧಿಕಾರವನ್ನು ಹಿಡಿಯುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ: ನ್ಯಾಯಾಧೀಶ ದಂಪತಿ ಮೇಲೆ ಹಲ್ಲೆ: ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ.. ಲೈಸನ್ಸ್ ರಿವಾಲ್ವರ್ - ರೈಫಲ್ ದರೋಡೆ