ವಡೋದರಾ(ಗುಜರಾತ್): 200 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಈ ಎಲ್ಲ ಮೀನುಗಾರರು ಇಂದು ವಾಘಾ ಗಡಿಯ ಮೂಲಕ ರೈಲಿನಲ್ಲಿ ವಡೋದರಾಕ್ಕೆ ಬಂದಿಳಿದರು. ಅಲ್ಲಿಂದ ಬಸ್ಗಳಲ್ಲಿ ಮೀನುಗಾರರನ್ನು ತಮ್ಮ ತಮ್ಮ ಸ್ಥಳಗಳಿಗೆ ಅಧಿಕಾರಿಗಳು ಕಳುಹಿಸಿಕೊಟ್ಟಿದ್ದಾರೆ. ಭಾರತದ ಸಮುದ್ರ ಗಡಿಯನ್ನು ಮೀರಿ ಮೀನುಗಾರಿಕೆ ನಡೆಸುತ್ತಿದ್ದ ಕಾರಣಕ್ಕೆ ಗುಜರಾತ್‌ನ ಮೀನುಗಾರರನ್ನು ಪಾಕಿಸ್ತಾನದ ಕೋಸ್ಟ್ ಗಾರ್ಡ್ ಸಿಬ್ಬಂದಿ ಬಂಧಿಸಿ, ಜೈಲಿನಲ್ಲಿ ಇರಿಸಿದ್ದರು.
ಕೇಂದ್ರ ಹಾಗೂ ಗುಜರಾತ್ ಸರ್ಕಾರದ ಪ್ರಯತ್ನದಿಂದ ಪಾಕಿಸ್ತಾನದಲ್ಲಿ ಬಂಧಿಯಾಗಿದ್ದ ಗುಜರಾತ್ ರಾಜ್ಯದ 200 ಮೀನುಗಾರರು ತಾಯ್ನಾಡಿಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಪಾಕಿಸ್ತಾನದಿಂದ ಬಿಡುಗಡೆಯಾದ ಮೀನುಗಾರರನ್ನು ಜೂನ್ 2 ರಂದು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು. ಆ ಬಳಿಕ ಗುಜರಾತ್ ಮೀನುಗಾರಿಕಾ ಇಲಾಖೆ ತಂಡ ಅವರೆಲ್ಲರಿಗೆ ರೈಲು ವ್ಯವಸ್ಥೆ ಮಾಡಿ, ವಡೋದರಾಕ್ಕೆ ಕರೆತಂದಿದ್ದಾರೆ. ಬಿಡುಗಡೆಯಾದ 200 ಮೀನುಗಾರರು ಗಿರ್, ಸೋಮನಾಥ್, ದೇವ್, ಭೂಮಿ ದ್ವಾರಕಾ, ಪೋರಬಂದರ್, ನವಸಾರಿ ಮತ್ತು ಜುನಾಗಢ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.
ಪಾಕಿಸ್ತಾನದಿಂದ ಬಿಡುಗಡೆಯಾದ ಉನಾದ ಮೀನುಗಾರ ಶೈಲೇಶ್ ಪರ್ಮಾರ್ ಮಾತನಾಡಿ, ನಾವು ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಪಾಕಿಸ್ತಾನ ನೌಕಾಪಡೆಯ ಕೋಸ್ಟ್ ಗಾರ್ಡ್ ಸಿಬ್ಬಂದಿ ನಮ್ಮನ್ನು ಹಿಡಿದು ಜೈಲಿ ಇರಿಸಿದ್ದರು. ಈ ಘಟನೆ ಏಪ್ರಿಲ್ 2021ರಂದು ನಡೆದಿತ್ತು. ನಂತರವೂ ಕೆಲವು ಭಾರತೀಯ ಮೀನುಗಾರರನ್ನು ಬಂಧಿಸಿ ಇಲ್ಲಿಗೆ ಕರೆತಂದರು. ಅವರನ್ನು ಕೂಡ ಶೀಘ್ರವಾಗಿ ಭಾರತಕ್ಕೆ ಕರೆತರಬೇಕು ಎಂದು ಆಶಿಸುತ್ತೇನೆ ಎಂದರು.
ಪಾಕಿಸ್ತಾನದಿಂದ ಬಿಡುಗಡೆಯಾದ ಮೀನುಗಾರ ಉಮೇಶಭಾಯ್ ಮಾತನಾಡಿ, ದೋಣಿಯಲ್ಲಿ ನಾವು ಆರು ಮಂದಿ ಇದ್ದೆವು ಮತ್ತು ಮೀನುಗಾರಿಕೆಯ ಸಮಯದಲ್ಲಿ ಪಾಕಿಸ್ತಾನದ ಕೋಸ್ಟ್ ಗಾರ್ಡ್ ಸಿಬ್ಬಂದಿ ನಮ್ಮನ್ನು ಬಂಧಿಸಿದ್ದರು. ಜೊತೆಗೆ ಇತರೆ 7 ದೋಣಿಗಳನ್ನು ವಶಪಡಿಸಿಕೊಂಡು, ಅದರಲ್ಲಿದ್ದವರನ್ನು ಕರಾಚಿಗೆ ಕರೆದೊಯ್ದರು. ಎರಡು ಮೂರು ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ನಮ್ಮನ್ನು ಬಿಡುಗಡೆ ಮಾಡಲು 2 ವರ್ಷಕ್ಕೂ ಹೆಚ್ಚು ಸಮಯ ಹಿಡಿಯಿತು. ಇನ್ನೂ 280 ಮೀನುಗಾರರು ಜೈಲಿನಲ್ಲಿಯೇ ಇದ್ದಾರೆ. ಅವರ ಬಿಡುಗಡೆ ಭಾರತ ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಒಡಿಶಾ ರೈಲು ದುರಂತ, 124 ಶವಗಳ ಗುರುತೇ ಸಿಕ್ತಿಲ್ಲ: ಡಿಎನ್ಎ ಪರೀಕ್ಷೆಗೆ ಮುಂದಾದ ಸರ್ಕಾರ
ಜರ್ಮನಿಯಲ್ಲಿರುವ ಮಗುವನ್ನು ಭಾರತಕ್ಕೆ ಕರೆತರಲು ಪ್ರಧಾನಿ ಮಧ್ಯಸ್ಥಿಕೆ ಬೇಕು: ಇತ್ತೀಚೆಗೆ ಜರ್ಮನಿಯಲ್ಲಿ ಸಿಕ್ಕಿಬಿದ್ದಿರುವ ಗುಜರಾತ್‌ನ ಬೇಬಿ ಅರಿಹಾ ಶಾ ಪ್ರಕರಣ ಸಂಬಂಧ ಬಾಲಕಿಯ ತಾಯಿ ಮೋದಿ ಸರ್ಕಾರದ ಮಧ್ಯಸ್ಥಿಕೆಗೆ ಕೋರಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬೇಬಿ ಅರಿಹಾಳನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರುವುದಾಗಿ ಭರವಸೆ ನೀಡಿತ್ತು. ಅಹಮದಾಬಾದ್‌ನ ಅರಿಹಾ ಶಾ ಕಳೆದ 27 ತಿಂಗಳುಗಳಿಂದ ಜರ್ಮನಿಯಲ್ಲಿದ್ದಾಳೆ.
ಅರಿಹಾ ಶಾ 7 ತಿಂಗಳ ಮಗುವಾಗಿದ್ದಾಗ, ಅವಳನ್ನು ಜರ್ಮನಿಯ ಯುವ ಕಲ್ಯಾಣದ ವಶಕ್ಕೆ ಕಳುಹಿಸಲಾಗಿತ್ತು. ಬಾಲಕಿಯ ಪೋಷಕರ ಮೇಲೆ ದೈಹಿಕ ದೌರ್ಜನ್ಯದ ಆರೋಪ ಹೊರಿಸಲಾಗಿತ್ತು. ನಂತರ ಈ ಆರೋಪಗಳು ಸುಳ್ಳು ಎಂದು ಸಾಬೀತಾಯಿತು. ತಂದೆ ಭಾವೇಶ್ ಮತ್ತು ತಾಯಿ ಧಾರಾ ಶಾ ಹೆಣ್ಣು ಮಗುವಿನ ಪಾಲನೆಯನ್ನು ಮರಳಿ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ.