ಕೊರೊನಾ ಬಳಿಕ ಇದೀಗ ಮಂಕಿಪಾಕ್ಸ್ ವೈರಸ್ ವಿಶ್ವದಾದ್ಯಂತ ಆತಂಕ ಮೂಡಿಸುತ್ತಿದೆ. ಈಗಾಗಲೇ ಮಂಕಿಪಾಕ್ಸ್ 20ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, 200 ಪ್ರಕರಣ ದೃಢಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ತಿಳಿಸಿದೆ. ಮಂಕಿಪಾಕ್ಸ್ ವೈರಸ್ ದಂಶಕಗಳು ಹಾಗೂ ಮಂಗಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ. ಸಾಂದರ್ಭಿಕವಾಗಿ ಜನರಿಗೂ ಹರಡುವ ವೈರಸ್ ಇದಾಗಿದ್ದು, ಸಿಡುಬಿನ ಜಾತಿಗೆ ಸೇರುತ್ತದೆ.
ಏನಿದು ಮಂಕಿಪಾಕ್ಸ್?: ಮಧ್ಯ ಹಾಗೂ ಪಶ್ಚಿಮ ಆಫ್ರಿಕಾದಲ್ಲಿ ಮಂಕಿಪಾಕ್ಸ್ ಪ್ರಕರಣ ಹೆಚ್ಚಾಗಿ ಕಂಡು ಬಂದಿವೆ. 1958ರಲ್ಲಿ ಇದನ್ನು ಮೊದಲ ಬಾರಿಗೆ ಮಂಗಗಳಲ್ಲಿ ಕಂಡು ಹಿಡಿಯಲಾಗಿತ್ತು. ಹೀಗಾಗಿ, ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ. 1970ರಲ್ಲಿ ಮೊದಲ ಬಾರಿಗೆ ಕಾಂಗೋದ ಬಾಲಕನಲ್ಲಿ ರೋಗ ಪತ್ತೆಯಾಗಿತ್ತು.
ಕೋವಿಡ್ ಭೀತಿಯಿಂದ ಚೇತರಿಸಿಕೊಂಡಿರುವ ಭಾರತಕ್ಕೂ ಮಂಕಿಪಾಕ್ಸ್ ಆತಂಕ ಶುರುವಾಗಿದೆ. ವೈರಸ್ ದೇಶದೊಳಗೆ ನುಸುಳದಂತೆ ತಡೆಗಟ್ಟಲು ಅಂತಾರಾಷ್ಟ್ರೀಯ ಪ್ರವೇಶ ಕೇಂದ್ರಗಳಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂಬೈನಲ್ಲಿ ಈಗಾಗಲೇ ಮಂಕಿಪಾಕ್ಸ್ ರೋಗಕ್ಕಾಗಿ ಪ್ರತ್ಯೇಕ ವಾರ್ಡ್ ನಿರ್ಮಿಸಲಾಗಿದೆ.
ಮಂಕಿಪಾಕ್ಸ್ ವೈರಸ್ ಮಾನವರಿಗೆ ಬೇಗನೇ ಮತ್ತು ಸುಲಭವಾಗಿ ಹರಡುವುದಿಲ್ಲ. ಹರಡಿದರೂ ಇದನ್ನು ಕೆಲವೇ ವಾರಗಳಲ್ಲಿ ಗುಣಪಡಿಸಬಹುದು. ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಬಹಳ ಕಡಿಮೆ ಎಂದು ವರದಿಗಳು ತಿಳಿಸಿವೆ. ಇದಕ್ಕೆ ಸಿಡುಬಿಗೆ ನೀಡಲಾಗುವ ಲಸಿಕೆಯೇ ರಾಮಬಾಣ ಎಂದು ಗುರುತಿಸಲಾಗಿದೆ.