ಫಿರೋಜಾಬಾದ್: ಇಂದು ಬೆಳಿಗ್ಗೆ ಸುಮಾರು ಒಂದು ಡಜನ್ ವಾಹನಗಳು ಒಂದ್ಕೊಂದು ಡಿಕ್ಕಿ ಹೊಡೆದು ಜಖಂಗೊಂಡಿರುವ ಘಟನೆ ಫಿರೋಜಾಬಾದ್‌ನ ಆಗ್ರಾ - ಲಖನೌ ಎಕ್ಸ್‌ಪ್ರೆಸ್ ಹೈವೇಯಲ್ಲಿ ನಡೆದಿದೆ.
ಸುಮಾರು 12ಕ್ಕೂ ಹೆಚ್ಚು ವಾಹನಗಳು ಒಂದ್ಕೊಂದು ಡಿಕ್ಕಿ ಹೊಡೆದು ಜಖಂಗೊಂಡಿದ್ದು, ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 6 ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಿರ್ಸಗಂಜ್ ಮತ್ತು ಸೈಫೈ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತರ ದಿನಗಳಿಗೆ ಹೋಲಿಸಿದರೆ ಇಂದು ದಟ್ಟವಾದ ಮಂಜು ಕವಿದಿತ್ತು. ಸಿರ್ಸಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಖಂಬಾ ಸಂಖ್ಯೆ 76 ರ ಸಮೀಪದ ಆಗ್ರಾ-ಲಖನೌ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಮೊದಲ ಬಸ್ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ನಂತರ ಸುಮಾರು ಒಂದು ಡಜನ್ ವಾಹನಗಳು ಡಿಕ್ಕಿ ಹೊಡೆದ ಜಖಂಗೊಂಡಿದ್ದಾವೆ. ಇವುಗಳಲ್ಲಿ ನಾಲ್ಕು ಬಸ್ಗಳು ಮತ್ತು ಇತರ ಸಣ್ಣ ವಾಹನಗಳು ಸೇರಿವೆ.
ಸ್ಥಳೀಯರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ಷಣಾ ಕಾರ್ಯ ಕೈಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತಕ್ಕೀಡಾದ ವಾಹನಗಳನ್ನು ಕ್ರೇನ್‌ಗಳ ಸಹಾಯದಿಂದ ತೆಗೆದುಹಾಕಲಾಗಿದ್ದು, ರಸ್ತೆ ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಗಿದೆ ಎಂದು ಸಿರ್ಸಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಗಿರೀಶ್ ಗೌತಮ್ ಹೇಳಿದ್ದಾರೆ.