ಪಾಟ್ನಾ (ಬಿಹಾರ): ಪಶ್ಚಿಮ ಚಂಪಾರಣ್ ಜಿಲ್ಲೆಯ ಬಘಾದಲ್ಲಿ ದೋಣಿ ಮುಳುಗಡೆಯಾಗಿದ್ದು, ಅವಘಡದಲ್ಲಿ 20 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಅಧಿಕಾರಿಯ ಮಾಹಿತಿ ಪ್ರಕಾರ, ದಿಯಾರಾ ಪ್ರದೇಶದಲ್ಲಿರುವ ವಿವಿಧ ಗ್ರಾಮಗಳಿಂದ ಬಾಘಾ ನಗರದ ದೀನ್ ದಯಾಳ್ ಘಾಟ್‌ಗೆ ದೋಣಿಯಲ್ಲಿ 25 ಮಂದಿ ಪ್ರಯಾಣಿಸುತ್ತಿದ್ದರು.
ದೋಣಿ ಗಂಡಕ್ ನದಿಯ ಮಧ್ಯಕ್ಕೆ ತಲುಪಿದಾಗ ತೀವ್ರವಾಗಿ ಗಾಳಿ ಬೀಸಿರುವ ಪರಿಣಾಮ ಅಲೆಗಳು ಉಂಟಾಗಿ ದೋಣಿ ಮಗುಚಿದೆ. ಈ ಸಂದರ್ಭದಲ್ಲಿ 5 ಮಂದಿ ಈಜಿ ದಡ ಸೇರಿದ್ದು, ಉಳಿದ 20 ಮಂದಿ ನಾಪತ್ತೆಯಾಗಿದ್ದಾರೆ ಎಂದು ಎಸ್‌ಡಿಆರ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ನಾಪತ್ತೆಯಾಗಿರುವ ಜನರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಡೈವರ್‌ಗಳ ಸಹಾಯ ಪಡೆದಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಹಾರ ಮತ್ತು ನೇಪಾಳದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಳೆದ ಒಂದು ತಿಂಗಳಿನಿಂದ ಉತ್ತರ ಬಿಹಾರದ ಹಲವು ಜಿಲ್ಲೆಗಳಲ್ಲಿ ಹರಿಯುವ ಗಂಡಕ್ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಿಂದಾಗಿ ರೈಲು ಮತ್ತು ರಸ್ತೆ ಸೇರಿದಂತೆ ಹೆಚ್ಚಿನ ಸಾರಿಗೆ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಇಲ್ಲಿನ ಜನ ದೋಣಿ ಮೂಲಕ ಸಾಗಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.