ಜೈಪುರ್(ರಾಜಸ್ಥಾನ): ಉತ್ತರ ಭಾರತದಲ್ಲಿ ವರುಣನ ಆರ್ಭಟ ಆರಂಭವಾಗಿದೆ. ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿ ನಿನ್ನೆ ಒಂದೇ ದಿನ ಸಿಡಿಲಿಗೆ 61 ಮಂದಿ ಬಲಿಯಾಗಿದ್ದಾರೆ. ಹಲವರು ಗಾಯಗೊಂಡಿರುವ ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ 41 ಮಂದಿ ಸಾವು
ಉತ್ತರ ಪ್ರದೇಶದ ಕೌಶಂಬಿ, ಫತೇಪುರ್ ಮತ್ತು ಫಿರೋಜಾಬಾದ್ ಜಿಲ್ಲೆಗಳಲ್ಲಿ ಸಿಡಿಲಿಗೆ ನಿನ್ನೆ 41 ಮಂದಿ ಸಾವನ್ನಪ್ಪಿದರು. ಸಿಎಂ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಕೌಶಂಬಿ ಜಿಲ್ಲೆಯಲ್ಲಿ ಮೃತಪಟ್ಟವರನ್ನು ರುಕ್ಮಾ(12), ಮೂರತ್ ಧ್ವಜ್ (50), ರಾಚಮಂದ್ರ (32) ಹಾಗೂ 15 ವರ್ಷದ ಮಯಾಂಕ್ ಎಂದು ಗುರುತಿಸಲಾಗಿದೆ. ಮುರ್ಹಿಯಾ ಡೋಲಿ ಗ್ರಾಮದ ರುಕ್ಮಾ ಮತ್ತು ಮಯಾಂಗ್ ಸಿಂಗ್ ಗದ್ದೆಯಲ್ಲಿ ಕೆಲಸ ಸೇರಿದಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಮಳೆ ಆರಂಭವಾಗಿದೆ. ಈ ವೇಳೆ ಮರಗಳ ಕೆಳಗಡೆ ಆಶ್ರಯ ಪಡೆದಿದ್ದಾಗ ಬಂದ ಸಿಡಿಲಿನಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫತೇಪುರ್ ಜಿಲ್ಲೆಯಲ್ಲಿ ಸೋನಿಯಾ(54) ಮಥುರಾ (37), ಶಿವ್‌ಕಾಲಿ (60) ಸಾವನ್ನಪ್ಪಿದ್ದಾರೆ. ಫಿರೋಜಾಬಾದ್‌ನಲ್ಲಿ ಹೇಮರಾಜ್ (50), ರಾಮ್‌ಸೇವಕ್ (40) ಅವರು ಬೇವಿನ ಮರದ ಕೆಳಗಡೆ ನಿಂತಾಗ ಬಡಿದ ಸಿಡಿಲಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಗಳ ಕಂಬನಿ ಮಿಡಿದು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಹಾಗೂ ಗಾಯಾಗಳುಗಳಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ: ರಾಜಕೀಯಕ್ಕೆ ತಲೈವಾ ರಜನಿಕಾಂತ್ ಗುಡ್ಬೈ..!
ರಾಜಸ್ಥಾನದಲ್ಲಿ 20 ಮಂದಿ ಸಾವು
ರಾಜಸ್ಥಾನದ ಜೈಪುರ್, ಧೋಲ್‌ಪುರ್, ಕೋಟಾ, ಚಕ್ಸು ಹಾಗೂ ಜಾಲ್ವಾರ್‌ನಲ್ಲಿ ಭಾನುವಾರ 8 ಮಂದಿ ಮಕ್ಕಳು ಸೇರಿದಂತೆ ಕನಿಷ್ಠ 20 ಮಂದಿ ಸಿಡಿಲಿನಿಂದ ಮೃತಪಟ್ಟಿದ್ದಾರೆ. ಮೃತರಲ್ಲಿ 11 ಮಂದಿ ಯುವಕರು ಸೇರಿದ್ದು, ಜೈಪುರದ ಬೆಟ್ಟ ಪ್ರದೇಶ ಅಂಬೇರ್ ಕೋಟೆ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಗುಡುಗು, ಸಿಡಿಲಿನಿಂದ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯ ಕೈಗೊಂಡಿದ್ದ, ನಾಲ್ವರು ಗಾಯಾಳುಗಳನ್ನು ರಕ್ಷಿಸಲಾಗಿದೆ. ರಾಜಸ್ಥಾನದ ದುರಂತಕ್ಕೂ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ.