ಕಣ್ಣೂರು(ಕೇರಳ): ಶಬರಿಮಲೆಗೆ ತೆರಳಿದ್ದ ಅಯ್ಯಪ್ಪ ಭಕ್ತರ ಬಸ್‍ಗೆ ಇಟ್ಟಿಗೆ ತುಂಬಿದ ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಸುಮಾರು 20ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರು ಗಾಯಗೊಂಡಿದ್ದಾರೆ. ಈ ಘಟನೆ ಪಾಣೂರು ತಂಗಳಪೀಠಿಕ ಬಳಿ ಶುಕ್ರವಾರ ಸಂಭವಿಸಿದೆ.
ಶಬರಿಮಲೆ ದರ್ಶನ ಮುಗಿಸಿ ತಮ್ಮ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ರಾಮನಗರ ತಾಲೂಕಿನ ಪೇಟೆಕುರುಬರಹಳ್ಳಿಯ ಅಯ್ಯಪ್ಪ ಮಾಲಾಧಾರಿಗಳ ಬಸ್ ಮತ್ತು ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಟ್ರಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಮಿನಿ ಬಸ್ ಮತ್ತು ಟ್ರಕ್ನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಮಿನಿ ಬಸ್ ಚಾಲಕ ಸೇರಿ ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ.
ಗಾಯಗೊಂಡ ಸುಮಾರು 20ಕ್ಕೂ ಹೆಚ್ಚು ಭಕ್ತಾದಿಗಳನ್ನು ಜನರು ತಲಶ್ಶೇರಿಯ ಇಂದಿರಾಗಾಂಧಿ ಆಸ್ಪತ್ರೆ ಮತ್ತು ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಗಾಯಾಳುಗಳನ್ನು ಹೊರತು ಪಡಿಸಿ ಉಳಿದವರು ಚೇತರಿಸಿಕೊಂಡಿದ್ದಾರೆ. ಬಳಿಕ ಅವರು ಮತ್ತೊಂದು ಖಾಸಗಿ ವಾಹನದ ಮೂಲಕ ವಾಪಸಾಗುತ್ತಿದ್ದಾರೆ.
ನವೆಂಬರ್ 20ರ ರಾತ್ರಿ ಶಬರಿಮಲೆ ದರ್ಶನಕ್ಕೆಂದು ಮಾಲೆ ಧರಿಸಿ ತೆರಳಿದ್ದರು. ಶಬರಿಮಲೆ ದರ್ಶನ ಮುಗಿಸಿಕೊಂಡು ಧರ್ಮಸ್ಥಳದತ್ತ ಬರುವಾಗ ಅವಘಡ ಸಂಭವಿಸಿದೆ. ಅವಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪಾಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಡಿವೈಡರ್ಗೆ ಡಿಕ್ಕಿ ಹೊಡೆದು ಮತ್ತೊಂದು ಬದಿಗೆ ಹಾರಿದ ಕಾರು.. ನೆಲಮಂಗಲ ಸರಣಿ ಅಪಘಾತದಲ್ಲಿ ಮೂರು ಕಾರು ಜಖಂ