ಹೈದ್ರಾಬಾದ್ (ತೆಲಂಗಾಣ): ರೈಲುಗಳ ಅಪಘಾತ ತಡೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಒಂದೇ ಹಳಿ ಮೇಲೆ ಎರಡು ರೈಲುಗಳು ಮುಖಾಮುಖಿ ಬಂದರೂ ಡಿಕ್ಕಿ ಸಂಭವಿಸದಂತಹ 'ಕವಚ' ಎಂಬ ತಂತ್ರಜ್ಞಾನವನ್ನು ರೈಲುಗಳಿಗೆ ಅಳವಡಿಸಲು ಯೋಜಿಸಿದ್ದು, ಇದರ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಸಿಕಂದರಾಬಾನ್ನ ಲಿಂಗಂಪಲ್ಲಿ-ವಿಕಾರಬಾದ್ ಸಮೀಪ ಶುಕ್ರವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಮ್ಮುಖದಲ್ಲೇ ಎರಡು ರೈಲುಗಳ ಪ್ರಾಯೋಗಿಕ ಸಂಚಾರ ಮಾಡಲಾಗಿದೆ. ಸ್ಥಳೀಯವಾಗಿಯೇ ಅಭಿವೃದ್ಧಿಪಡಿಸಲಾದ ಆಟೋಮ್ಯಾಟಿಕ್ ಟ್ರೈನ್ ಪ್ರೊಟೆಕ್ಷನ್ (ATP) ವ್ಯವಸ್ಥೆ ನೆರವಿನಿಂದ ಈ ಪ್ರಾಯೋಗಿಕ ಸಂಚಾರ ನಡೆಸಲಾಗಿದ್ದು, ಇದಕ್ಕೆ 'ಕವಚ' ಎಂದು ಹೆಸರಿಡಲಾಗಿದೆ.
'ಕವಚ' ವ್ಯವಸ್ಥೆಯಿಂದ ಒಂದೇ ಹಳಿ ಮೇಲೆ ಎರಡು ರೈಲುಗಳು ಎದುರು-ಬದುರು ಬಂದರು ಕೂಡ 380 ಮೀಟರ್ ದೂರದಲ್ಲೇ ನಿಲ್ಲುತ್ತವೆ. ಇದನ್ನು ಶೂನ್ಯ ಅಪಘಾತ ಗುರಿ ಸಾಧಿಸುವ ಉದ್ದೇಶದಿಂದಲೇ ಅಭಿವೃದ್ಧಿ ಪಡಿಸಲಾಗಿದೆ.
ಇದರ ಪ್ರಾಯೋಗಿಕ ಪರೀಕ್ಷೆ ಸಂದರ್ಭದಲ್ಲಿ ಒಂದು ರೈಲಿನಲ್ಲಿ ಸಚಿವ ಅಶ್ವಿನಿ ವೈಷ್ಣವ್ ಮತ್ತು ಎದುರುಗಡೆ ಬರುವ ಮತ್ತೊಂದು ರೈಲಿನಲ್ಲಿ ರೈಲ್ವೆ ಮಂಡಳಿಯ ಮುಖ್ಯಸ್ಥರು ಇದ್ದರು. ಈ ಎರಡು ರೈಲುಗಳು ವೇಗವಾಗಿ ಒಂದೇ ಹಳಿ ಮೇಲೆ ಸಂಚರಿಸಿದರೂ, ಎರಡೂ ರೈಲುಗಳು 380 ಮೀಟರ್ ದೂರದಲ್ಲಿ ನಿಲ್ಲುವ ಮೂಲಕ ಈ ಪ್ರಯೋಗ ಯಶಸ್ವಿಗೊಳಿಸಿದವು. ಇದರ ವಿಡಿಯೋ ರೈಲ್ವೆ ಸಚಿವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಿಗ್ನಲ್ ಜಂಪ್ ಸೇರಿ ಯಾವುದೇ ಪ್ರಮಾದಗಳನ್ನು ಮಾಡಿದರೂ ಡಿಜಿಟಲ್ ತಂತ್ರಜ್ಞಾನವು ಗಮನಿಸುವ ಮೂಲಕ ರೈಲನ್ನು ನಿಲ್ಲಿಸುತ್ತದೆ. ಅಧಿಕ ಫ್ರಿಕ್ವೆನ್ಸಿಯ ರೇಡಿಯೋ ಸಂವಹನದಿಂದ ರೈಲಿನ ಚಲನೆಯ ನಿರಂತರ ಅಪ್ಡೇಟ್ ನೀಡುತ್ತದೆ. ಅಲ್ಲದೇ, ಎಸ್ಐಎಲ್-4 (Safety Integrity Level-4) ಹಂತದ ಸುರಕ್ಷತೆಯನ್ನು ಖಾತ್ರಿ ಪಡಿಸುತ್ತದೆ. ಇದು ವಿಶ್ವದ ಅತಿ ಕಡಿಮೆ ವೆಚ್ಚದ ತಂತ್ರಜ್ಞಾನವಾಗಿದೆ. ಬೇರೆಡೆ ಇದನ್ನು ಅನುಷ್ಠಾನ ಮಾಡಲು ಪ್ರತಿ ಕಿಲೋ ಮೀಟರ್ಗೆ 2 ಕೋಟಿ ರೂ. ವೆಚ್ಚವಾದರೆ, ನಮ್ಮಲ್ಲಿ 50 ಲಕ್ಷ ರೂ. ವೆಚ್ಚವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.