ಮಥುರಾ (ಉತ್ತರ ಪ್ರದೇಶ): ಶ್ರೀಕೃಷ್ಣನ ಜನ್ಮಸ್ಥಳಕ್ಕೆ ಹೊಂದಿಕೊಂಡಿರುವ 17ನೇ ಶತಮಾನದ ಮಸೀದಿಯನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಲು ಒಂದು ವಾರಕ್ಕಿಂತ ಕಡಿಮೆ ಸಮಯವಿರುವಾಗಲೇ, ಅಖಿಲ ಭಾರತ ಪುರೋಹಿತರ ಸಂಘ ಮತ್ತು ಸಾಮಾಜಿಕ ಸಂಸ್ಥೆಯೊಂದು ಪ್ರಕರಣದ ಪಕ್ಷದಾರರಾಗಲು( ಪಾರ್ಟಿಯಾಗಲು) ಕೋರಿ ಅರ್ಜಿ ಸಲ್ಲಿಸಿವೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಗಳಲ್ಲಿ, ಅಖಿಲ ಭಾರತೀಯ ತೀರ್ಥ ಪುರೋಹಿತರ ಮಹಾಸಭಾ ಮತ್ತು ಮಾಥುರಾ ಚತುರ್ವೇದಿ ಪರಿಷತ್, ಕತ್ರಿ ಕೇಶವ್ ದೇವ್ ದೇವಸ್ಥಾನದೊಳಗೆ ನಿರ್ಮಿಸಲಾದ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕುವಂತೆ ಕೋರಿರುವ ಅರ್ಜಿಯನ್ನು ಖಂಡಿಸಿ, ಇದು ಪಟ್ಟಣದಲ್ಲಿ ಕೋಮು ಗೊಂದಲ ಸೃಷ್ಟಿಸುವ ಸಾಧ್ಯತೆ ಇದೆ ಎಂದಿದೆ.
ಮಹಾಸಭಾ ಅಧ್ಯಕ್ಷ ಮಹೇಶ್ ಪಾಠಕ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ನಗರದಲ್ಲಿ ಶಾಂತಿಗೆ ಯಾವುದೇ ಅಡ್ಡಿಯಾಗಬಾರದು. ರಾಮ ಜನ್ಮಭೂಮಿ ಸಮಸ್ಯೆಯ ನಂತರ ಈ ಸಮಸ್ಯೆಯನ್ನು ಅನಗತ್ಯವಾಗಿ ಎತ್ತಲಾಗುತ್ತಿದೆ. ಎಲ್ಲ ಧಾರ್ಮಿಕ ಸಮುದಾಯಗಳ ಸದಸ್ಯರು ಪಟ್ಟಣದಲ್ಲಿ ಸಂತೋಷದಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಮತ್ತೊಂದು ದೇವಾಲಯ - ಮಸೀದಿ ವಿವಾದಕ್ಕಿಂತ ಜನರು ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯನ್ನು ಬಯಸುತ್ತಾರೆ" ಎಂದು ಹೇಳಿದರು.
"ಮಥುರಾ ಪಟ್ಟಣದ ಕೋಮು ಸೌಹಾರ್ದತೆ ಹಾಳಾಗಬಾರದು. ಯಥಾಸ್ಥಿತಿ ಉಳಿಯಬೇಕೆಂದು ನಾವು ಬಯಸುತ್ತೇವೆ. ದೇವಾಲಯದ ಆವರಣದ ವಿಸ್ತರಣೆಗೆ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು" ಎಂದು ಪಾಠಕ್ ಹೇಳಿದರು.