ಹೈದರಾಬಾದ್: ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಅಂತಾರೆ. ಆದರೆ, ಇಲ್ಲಿ ಅದು ಉಲ್ಟಾ ಆಗಿದೆ. ಶ್ರಮ ವಹಿಸಿ ದುಡಿದು ಕೂಡಿಟ್ಟಿದ್ದ 2 ಲಕ್ಷ ರೂಪಾಯಿ ಹಣವನ್ನು ಇಲಿಯೊಂದು ತಿಂದು ಹಾಕಿದೆ. ಮೊದಲೇ ಹೇಳಿ ಕೇಳಿ ಬಡತನ. ಈಗ ಮೂಸಿಕ ನೀಡಿದ ಆಘಾತಕ್ಕೆ ಕುಟುಂಬ ತಲ್ಲಣಿಸಿದೆ. ಅರ್ಧಂಬರ್ಧ ನೋಟುಗಳನ್ನು ಪಡೆಯಲು ಬ್ಯಾಂಕ್ ಕೂಡ ಸುತಾರಾಂ ಒಪ್ಪುತ್ತಿಲ್ಲ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಪರಿಗಿರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಲೀಲಾ ಇಲಿಯಿಂದ ನಷ್ಟಕ್ಕೀಡಾದ ಮಹಿಳೆ. ಕೊರೊನಾ ವೇಳೆ ಪತಿ ಮೃತಪಟ್ಟಿದ್ದ. ಇದಾದ ಬಳಿಕ ಆಕೆಯ ಹೆಗಲ ಮೇಲೆ ಇಡೀ ಕುಟುಂಬದ ಹೊಣೆ ಬಿದ್ದಿತು. ಈಕೆಗೆ ಓರ್ವ ಮಗಳಿದ್ದಾರೆ. 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ವಾಚ್ಮ್ಯಾನ್ ಆಗಿ ಕೆಲಸ ಮಾಡವ ಶಿವಲೀಲಾ ಬಂದ ಸಂಬಳದಲ್ಲಿ ಇಂತಿಷ್ಟು ಹಣವನ್ನು ಭವಿಷ್ಯಕ್ಕಾಗಿ ಕೂಡಿಟ್ಟಿದ್ದಳು. ಆದರೆ, ಮೂಸಿಕನ ದಾಳಿಗೆ ಭವಿಷ್ಯವೇ ಮಸುಕಾಗಿದೆ.
ಹೇಗಾಯ್ತು?: ವಾಚ್ಮ್ಯಾನ್ ಆಗಿ ಕೆಲಸ ಮಾಡುವ ಶಿವಲೀಲಾ ಅವರು ಕಳೆದೆಂಟು ತಿಂಗಳಿನಿಂದ ಪೈಸಾ ಪೈಸಾ ಕೂಡಿಟ್ಟು 2 ಲಕ್ಷ ರೂಪಾಯಿ ಹೊಂದಿಸಿದ್ದರು. ತಾವಿದ್ದ ಗುಡಿಸಲಿನಲ್ಲಿ ಅಕ್ಕಿ ಮೂಟೆಯ ಸಂದಿನೊಳಗೆ ಈ ಹಣವನ್ನು ಬಚ್ಚಿಟ್ಟಿದ್ದರು. ಹಲವು ದಿನಗಳಿಂದ ಹಣದ ಕಡೆ ಗಮನ ನೀಡಿರಲಿಲ್ಲ. ಸೋಮವಾರದಂದು ಮೂಟೆಯಲ್ಲಿದ್ದ ಅಕ್ಕಿ ತೆಗೆಯುವ ವೇಳೆ ಹಣವನ್ನು ನೋಡಿದ್ದಾರೆ. ಆಗಲೇ ನೋಡಿ ಆಕೆಗೆ ಮಿಂಚು ಹೊಡೆದಂತಾಗಿದೆ. ಅಕ್ಕಿಯ ಜೊತೆಗಿಟ್ಟಿದ್ದ 2 ಲಕ್ಷ ರೂಪಾಯಿ ನೋಟುಗಳನ್ನು ನುಸಿ ಮತ್ತು ಇಲಿ ತಿಂದು ಹಾಕಿವೆ. ಚೀಲದಲ್ಲಿ ನೋಟಿನ ಚೂರುಗಳು ಸಿಕ್ಕಿವೆ. ಇದನ್ನು ಕಂಡ ಶಿವಲೀಲಾ ಅವರಿಗೆ ಆಕಾಶವೇ ತಲೆಮೇಲೆ ಬಿದ್ದಂತಾಗಿದೆ.
ಹಣದ ಚೂರು ಪಡೆಯಲು ಬ್ಯಾಂಕ್ ನಿರಾಕರಣೆ: ಇಲಿಯ ದಾಳಿಗೆ ನೋಟುಗಳು ಛಿದ್ರವಾಗಿದ್ದವು. ಚೂರು ಪಾರು ಉಳಿದ ನೋಟನ್ನು ತೆಗೆದುಕೊಂಡು ಬ್ಯಾಂಕ್ಗಳಿಗೆ ಅಲೆದಾಡಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ಹಾಳಾದ ನೋಟುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರಿಂದ ದಿಕ್ಕು ತೋಚದ ಶಿವಲೀಲಾ ಅವರು, ಬೇಗಂಪೇಟೆಯ ಪ್ರಜಾದರ್ಬಾರ್ ಹಾಲ್ನ ಮುಂದೆ ಧರಣಿ ಕೂತಿದ್ದಾರೆ. ತಮಗೆ ನಷ್ಟವಾಗಿದೆ. ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಮನೆ ನಿರ್ಮಾಣಕ್ಕೆ ಕೂಡಿಟ್ಟಿದ್ದ ಹಣ ಇಲಿ ಪಾಲಾಗಿದೆ. ತಮಗೆ ಸರ್ಕಾರ ಮನೆ ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೇಸ್ ಹಾಕಬೇಕಿರುವುದು ತ್ರಿಶಾ; ಮನ್ಸೂರ್ ಅಲಿ ಖಾನ್ಗೆ ಕೋರ್ಟ್ ಛೀಮಾರಿ!