ವಾರಣಾಸಿ : ಪ್ರತಿಷ್ಠಿತ ಹೋಟೆಲ್ವೊಂದರಲ್ಲಿ ಮಸಾಲೆ ದೋಸೆಯಲ್ಲಿ ಕಲಬೆರಕೆ ಕಂಡು ಬಂದಿದ್ದಕ್ಕಾಗಿ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬರೋಬ್ಬರಿ 2 ಲಕ್ಷದ 10 ಸಾವಿರ ರೂ. ದಂಡ ವಿಧಿಸಿದೆ. ಇದರೊಂದಿಗೆ, ಏಪ್ರಿಲ್ -2020ರಿಂದ ಜನವರಿ -2021ರವರೆಗೆ ಕಾಣಿಸಿಕೊಂಡ ಕಲಬೆರಕೆ ಆಹಾರ ಪದಾರ್ಥಗಳ ಪ್ರಕರಣಗಳಲ್ಲಿ ಒಟ್ಟು 40 ಲಕ್ಷ 54 ಸಾವಿರ ದಂಡ ವಿಧಿಸಲಾಗಿದೆ. ಈ ಪೈಕಿ 2021ರ ಜನವರಿ ಒಂದೇ ತಿಂಗಳಲ್ಲಿ ದಾಖಲಾದ ಸುಮಾರು 28 ಪ್ರಕರಣಗಳ ದಂಡದ ಮೊತ್ತವೇ 7.57 ಲಕ್ಷ ರೂ. ಇದೆ.
ಕಲಬೆರಕೆ ಆಹಾರದ ಬಗ್ಗೆ ಪರಿಣಾಮಕಾರಿ ಅಭಿಯಾನಗಳನ್ನು ನಡೆಸುತ್ತಿರುವ ವಾರಣಾಸಿ ಜಿಲ್ಲಾಡಳಿತ, ಸಾಕಷ್ಟು ಆಹಾರದ ಮಾದರಿಗಳನ್ನು ತೆಗೆದುಕೊಂಡು, ಅವುಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಅವರ ಸೂಚನೆಯ ಮೇರೆಗೆ, ಲಖನೌ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದೆ.
ಆಹಾರ ಪದಾರ್ಥಗಳಾದ ಹಾಲು, ಎಣ್ಣೆ, ಚೀಸ್, ತಿಂಡಿ, ಸಿಹಿತಿಂಡಿಗಳು ಮತ್ತು ಮಸಾಲೆಗಳು ಸೇರಿ 157 ವಿವಿಧ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಯೋಗಾಲಯದಿಂದ ಬಂದ ವರದಿಯಲ್ಲಿ ಆಹಾರದಲ್ಲಿ ಕಲಬೆರಕೆ ದೃಢಪಟ್ಟ ಕಾರಣವಾದ ನಂತರ, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು 7.57 ಲಕ್ಷ ರೂ. ದಂಡ ವಿಧಿಸಿದೆ. ಇನ್ನು, ಈ ಪ್ರಕರಣಗಳ ಪೈಕಿ ನಗರದ ಪ್ರತಿಷ್ಠಿತ ಹೋಟೆಲ್ಗಳು ಕೂಡ ಸೇರಿವೆ. ಈ ಹಿನ್ನೆಲೆ ಕಲಬೆರಕೆ ವಿರುದ್ಧದ ಅಭಿಯಾನವನ್ನು ಜಿಲ್ಲಾಡಳಿತ ತೀವ್ರಗೊಳಿಸಿದೆ.