ಮಥುರಾ: ಶ್ರೀಕೃಷ್ಣನ ಜನ್ಮಸ್ಥಾನ ಉತ್ತರಪ್ರದೇಶದ ಮಥುರಾದಲ್ಲಿ ಅಚಾತುರ್ಯ ನಡೆದಿದೆ. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ವಿಶ್ವವಿಖ್ಯಾತ ಬಂಕೆ ಬಿಹಾರಿ ವೃಂದಾವನ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಹಾಮಂಗಳಾರತಿ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಇಬ್ಬರು ಭಕ್ತರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ. ಮೃತ ಭಕ್ತರು ಮಧ್ಯಪ್ರದೇಶದವರು ಎಂದು ಗುರುತಿಸಲಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ವಿಶ್ವವಿಖ್ಯಾತ ಬಂಕೆ ಬಿಹಾರಿ ವೃಂದಾವನ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಮಧ್ಯರಾತ್ರಿ ದೇವಸ್ಥಾನದಲ್ಲಿ ನಡೆದ ಅದ್ದೂರಿ ಮಂಗಳಾರತಿ ವೇಳೆ ನೂಕುನುಗ್ಗಲು ಉಂಟಾಗಿದೆ. ಇದರಿಂದ ಓರ್ವ ಮಹಿಳೆ, ಪುರುಷ ಭಕ್ತರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಜೊತೆಗೆ 4 ಮಂದಿ ಗಾಯಗೊಂಡಿದ್ದಾರೆ.
ಕೃಷ್ಣ ಮಂಗಳಾರತಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಎಂದು ತಿಳಿದಿದ್ದರೂ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ವಿಫಲವಾದ ಪೊಲೀಸರನ್ನು ಜಿಲ್ಲಾಡಳಿತ ತರಾಟೆಗೆ ತೆಗೆದುಕೊಂಡಿದೆ. ಸೂಕ್ತ ಸರದಿ ವ್ಯವಸ್ಥೆ ಮಾಡದೇ ಇದ್ದ ಕಾರಣ ಕಾಲ್ತುಳಿತ ಉಂಟಾಗಿದೆ ಎಂದು ಹೇಳಲಾಗಿದೆ. ದುರ್ಘಟನೆಯಲ್ಲಿ ಮೃತಪಟ್ಟ ಭಕ್ತರ ಶವವನ್ನು ಮರಣೋತ್ತರ ಪರೀಕ್ಷೆ ನಡೆಸದೇ ಅವರ ಕುಟುಂಬಸ್ಥರು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ.