ವಾರಣಾಸಿ: ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇಬ್ಬರು ಮಕ್ಕಳು ಸೇರಿದಂತೆ ಮೂವರ ಮೇಲೆ ಗುಂಡು ಹಾರಿಸಿದ ಘಟನೆ ಮಿರ್ಜಾಮುರಾದ್ ಪ್ರದೇಶದ ಬಿಹ್ಡಾ ಗ್ರಾಮದ ಬಳಿ ಹೆದ್ದಾರಿಯಲ್ಲಿ ನಡೆದಿದೆ.
ಭಾನುವಾರ ಸಂಜೆ ವಿನಯ್ ಯಾದವ್ (16 ವರ್ಷ), ಚಿರಾಗ್ ಅಲಿಯಾಸ್ ಗುರುಪ್ರಸಾದ್ (26 ವರ್ಷ) ಮತ್ತು ರಾಧಿಕಾ (9 ವರ್ಷ) ಎಂಬುವವರ ಮೇಲೆ ಬೈಕ್ ಸವಾರರು ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಹದಿಹರೆಯದ ವಿನಯ್ ಯಾದವ್ ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಗುಂಡಿನ ದಾಳಿಯಿಂದಾಗಿ ಈ ಪ್ರದೇಶದಲ್ಲಿ ಭೀತಿ ಮೂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು.
ಏನಿದು ಘಟನೆ
ಭಾನುವಾರ ಸಂಜೆ 7: 30ಕ್ಕೆ ಮಿರ್ಜಾಮುರಾಡ್‌ನ ಅಂಡರ್‌ಪಾಸ್ ರಸ್ತೆಯಲ್ಲಿ ಇಬ್ಬರು ಬೈಕ್ ಸವಾರರು ಕುಡಿದ ಮತ್ತಿನಲ್ಲಿ ನಿಂದಿಸುತ್ತಾ ತೆರಳುತ್ತಿದ್ದರು. ಅದೇ ಹಾದಿಯಲ್ಲಿ ತೆರಳುತ್ತಿದ್ದ ಬಿಹಾ ಗ್ರಾಮದ ಒಂಬತ್ತನೇ ತರಗತಿಯ ವಿದ್ಯಾರ್ಥಿ ಮತ್ತು ವಿನಯ್ ಯಾದವ್ ನಿಂದನೆ ವಿರುದ್ಧ ತಿರುಗಿ ಬಿದ್ದರು. ನಂತರ ದುಷ್ಕರ್ಮಿಗಳು ಯಾದವ್ ಮೇಲೆ ಗುಂಡು ಹಾರಿಸಿದರು.
ಬಾಲಕನ ವಿರುದ್ಧ ಗುಂಡು ಹಾರಿಸಿದ ಕೂಡಲೇ ಅಂಗಡಿಯೊಂದರಲ್ಲಿ ನಿಂತಿದ್ದ ಕೆಲವರು ಮುಂದೆ ಹೋದರು. ನಂತರ ದುಷ್ಕರ್ಮಿಗಳು ಮತ್ತೆ ಗುಂಡು ಹಾರಿಸಿದರು. ಈ ವೇಳೆ, ಆ ಗುಂಡು ಮನೆಯ ಬಾಗಿಲಲ್ಲಿ ನಿಂತಿದ್ದ ಬಾಲಕಿ ರಾಧಿಕಾಗೆ ತಗುಲಿದೆ. ಕೂಡಲೇ ಬೈಕ್ ಸವಾರರು ಪರಾರಿಯಾಗಲು ಯತ್ನಿಸಿದ್ದಾರೆ.
ಪರಾರಿಯಾಗುತ್ತಿದ್ದ ಬೈಕ್ ಸವಾರರನ್ನು ಹಿಡಿಯಲು ಚಿರಾಗ್ ಅಲಿಯಾಸ್ ಗುರು ಪ್ರಸಾದ್ ಪ್ರಯತ್ನಿಸಿದ್ದಾರೆ. ಆದ್ರೆ ದುಷ್ಕರ್ಮಿಗಳು ಆತನ ಮೇಲೆಯೂ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಯಾದವ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದರು. ಯುವಕ ಮತ್ತು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬೆನ್ನ ಹಿಂದೆ ಬಿದ್ದಿದ್ದಾರೆ.