ಬೆಂಗಳೂರು: ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮ ‘ಗಗನಯಾನ’ದ ಭಾಗವಾಗಿ ಡಿಸೆಂಬರ್ನಲ್ಲಿ ಮೊದಲ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಆರಂಭಿಸಲು ಇಸ್ರೋ ಮುಂದಾಗಿದೆ. ಕೋವಿಡ್ ಬಿಕ್ಕಟ್ಟು ಎದುರಾಗಿದ್ದರಿಂದ ವಿಳಂಬವಾಗಿದೆ. ಹಾಗಾಗಿ ಮಾನವ ಸಹಿತ ಕಾರ್ಯಾಚರಣೆಗೆ ಎರಡು ವಿಮಾನಗಳನ್ನು ಹಾರಿಸಲು ಸಂಸ್ಥೆ ಯೋಜಿಸಿದೆ.
ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳು ಗಗನಯಾನ ಕಾರ್ಯಕ್ರಮದ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದು ಬೆಂಗಳೂರು ಮೂಲದ ಇಸ್ರೋ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ವಿವಿಧ ಭಾಗಗಳ ಲಾಕ್ಡೌನ್ಗಳು ವಿತರಣಾ ವೇಳಾ ಪಟ್ಟಿ ಮೇಲೂ ಪರಿಣಾಮ ಬೀರಿವೆ. ಸಂಸ್ಥೆಯು ಮಿಷನ್ಗಾಗಿ ಹಾರ್ಡ್ವೇರ್ ಅಂಶಗಳು ರೂಪಿಸಿದೆ.
ವಿನ್ಯಾಸ, ವಿಶ್ಲೇಷಣೆ ಹಾಗೂ ದಸ್ತಾವೇಜನ್ನು ಇಸ್ರೋ ಸಂಸ್ಥೆ ಮಾಡುತ್ತಿದೆ. ಆದರೆ ಗಗನಯಾನಕ್ಕೆ ಬೇಕಾದ ಮಷಿನ್ಗಳನ್ನು ದೇಶದ ನೂರಾರು ಕೈಗಾರಿಗಳು ತಯಾರಿಸಿ, ಪೂರೈಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಕ್ರಮದ ಉದ್ದೇಶವು ಭಾರತೀಯ ಉಡಾವಣಾ ರಾಕೆಟ್ನಲ್ಲಿ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯ ಪ್ರದರ್ಶಿಸುವುದು ಮತ್ತು ಅವರನ್ನು ಸುರಕ್ಷಿತವಾಗಿ ಭೂಮಿಗೆ ತರುವುದಾಗಿದೆ.
ಕೇಂದ್ರ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಈ ವರ್ಷದ ಫೆಬ್ರವರಿಯಲ್ಲಿ ಮೊದಲ ಮಾನವರಹಿತ ಕಾರ್ಯಾಚರಣೆಯನ್ನು, 2021 ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಹಾರಾಟ ನಡೆಯಲಿದೆ ಎಂದು ಹೇಳಿದ್ದರು. ಗಗನಯಾನ ಕಾರ್ಯಕ್ರಮದ ಭಾಗವಾಗಿ ನಾಲ್ಕು ಭಾರತೀಯ ಗಗನಯಾತ್ರಿ - ಅಭ್ಯರ್ಥಿಗಳು ಈಗಾಗಲೇ ರಷ್ಯಾದಲ್ಲಿ ಜೆನೆರಿಕ್ ಬಾಹ್ಯಾಕಾಶ ಹಾರಾಟ ತರಬೇತಿ ಪಡೆದಿದ್ದಾರೆ.
ಆಗಸ್ಟ್ 15, 2018 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗಗನಯಾನ ಕಾರ್ಯಕ್ರಮವನ್ನು ಘೋಷಿಸಿದರು. 2022 ರ ಆಗಸ್ಟ್ 15 ರಂದು ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಮೊದಲು ಮಾನವ ಬಾಹ್ಯಾಕಾಶ ಹಾರಾಟವನ್ನು ಪ್ರಾರಂಭಿಸುವುದು ಆರಂಭಿಕ ಗುರಿಯಾಗಿದೆ.
ಬಾಹ್ಯಾಕಾಶ ಏಜೆನ್ಸಿಯ ಮತ್ತೊಬ್ಬ ಅಧಿಕಾರಿಯು ಇಸ್ರೋ ಹೆಚ್ಚುವರಿ ಸಮಯ ಕೆಲಸ ಮಾಡುವ ಮೂಲಕ ಗುರಿಯನ್ನು ತಲುಪಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಮೂರು ವರ್ಷಗಳ ಹಿಂದೆ ಘೋಷಣೆ ಮಾಡಿರುವ ಈ ಯೋಜನೆಗೆ ಇಸ್ರೋ ಸಂಸ್ಥೆ ದಶಕಗಳಿಗೂ ಹಿಂದಿನಿಂದಲೇ ಕೆಲಸ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೆಲ ಮಷಿನ್ಗಳ ಪೂರೈಕೆಗಾಗಿ ಇಸ್ರೋ ಸಂಸ್ಥೆಯು ಫ್ರೆಂಚ್, ರಷ್ಯನ್ ಮತ್ತು ಯುಎಸ್ ಬಾಹ್ಯಾಕಾಶ ಸಂಸ್ಥೆಗಳ ಸಹಾಯವನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಲಾಕ್ಡೌನ್ನಿಂದಾಗಿ ಹೆಚ್ಚಿನ ಕೈಗಾರಿಕೆಗಳು ಮುಚ್ಚಿವೆ. ಹಾಗಾಗಿ ಕಾರ್ಯ ವಿಳಂಬವಾಗುತ್ತಿದೆ. ಮುಂದಿನ ವರ್ಷದ ಆಗಸ್ಟ್ ವೇಳೆಗೆ ಇಸ್ರೋ ಮಾನವ ಸಹಿತ ಕಾರ್ಯಾಚರಣೆ ಗುರಿ ಪೂರೈಸಲು ಪ್ರಯತ್ನಿಸುತ್ತೇವೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.