ಗುಮ್ಲಾ/ ಜಾರ್ಖಂಡ್: ವಾಮಾಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ಗುಮ್ಲಾ ನ್ಯಾಯಾಲಯವು 19 ಮಹಿಳೆಯರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಘಟನೆಯು ಕಳೆದ 9 ವರ್ಷಗಳ ಹಿಂದೆ ಜೂನ್ 11, 2013 ರಂದು ಗುಮ್ಲಾ ಜಿಲ್ಲೆಯ ಭರನೋ ಬ್ಲಾಕ್‌ನಲ್ಲಿರುವ ಕರಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಕರೌಂದಜೋರ್ ತುಕುಟೋಲಿ ಗ್ರಾಮದಲ್ಲಿ ನಡೆದಿತ್ತು. ವಾಮಾಚಾರಕ್ಕೆ ಸಂಬಂಧಿಸಿದಂತೆ ಬ್ರಿಜ್ನಿಯಾ ಇಂದ್ವರ್ ಮತ್ತು ಇಗ್ನಾಸಿಯಾ ಇಂದ್ವರ್ ಎಂಬ ಇಬ್ಬರು ಮಹಿಳೆಯರನ್ನು ಸಾಮೂಹಿಕ ಹತ್ಯೆ ಮಾಡಲಾಗಿತ್ತು.
ಈ ಕುರಿತು ಆರೋಪಿಗಳಾದ ಭಲೇರಿಯಾ ಇಂದ್ವಾರ್, ಎಮಿಲಿಯಾ ಇಂದ್ವಾರ್, ಕರಿಯಾ ದೇವಿ, ಜ್ರಾಲ್ ಡಿತಾ ಇಂದ್ವಾರ್, ಮಾಂಗ್ರಿ ದೇವಿ, ಖಿಸ್ತಿನಾ ಇಂದ್ವಾರ್, ಚಿಂತಾಮಣಿ ದೇವಿ, ವಿನಿತಾ ಇಂದ್ವಾರ್, ಜ್ಯೋತಿ ಇಂದ್ವಾರ್, ಮಾಲ್ತಿ ಇಂದ್ವಾರ್, ಗ್ಯಾಬ್ರೆಲ್ಲಾ ಇಂದ್ವಾರ್, ರಿಜಿತಾ ಇಂದ್ವಾರ್, ಮೋನಿಕಾ ಇಂದ್ವಾರ್, ನೀಲಂ ಇಂದ್ವಾರ್, ಮೋನಿಕಾ ಇಂದ್ವಾರ್, ಸುಶೀಲಾ ಇಂದ್ವಾರ್, ಕುರ್ಮೇಲಾ ಇಂದ್ವಾರ್, ಲಲಿತಾ ಇಂದ್ವಾರ್ ಮತ್ತು ರೊಸಾಲಿಯಾ ಇಂದ್ವಾರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಎಡಿಜೆ ಒನ್ ದುರ್ಗೇಶ್ ಚಂದ್ರ ಅವಸ್ತಿ ನೇತೃತ್ವದ ನ್ಯಾಯಾಲಯವು, 19 ಮಹಿಳೆಯರಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡದ ಮೊತ್ತವನ್ನು ಪಾವತಿಸಲು ವಿಫಲವಾದರೆ ಎರಡು ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಹಾವು ಕಚ್ಚಿ ಮೃತಪಟ್ಟ ಅಣ್ಣ; ಅಂತ್ಯಕ್ರಿಯೆಗೆ ಬಂದ ತಮ್ಮನಿಗೂ ಹಾವು ಕಡಿದು ಸಾವು