ನವದೆಹಲಿ: ಕೊರೊನಾ ಸಾಂಕ್ರಾಮಿಕ ಭಾರತದಲ್ಲಿ ಸುಮಾರು 19 ಲಕ್ಷ ಮಕ್ಕಳನ್ನು ಪೋಷಕರು ಅಥವಾ ಆರೈಕೆದಾರರಿಲ್ಲದಂತೆ ಮಾಡಿದೆ. ಇದು ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಅತಿ ಹೆಚ್ಚು ಎಂದು ದಿ ಲ್ಯಾನ್ಸೆಟ್ ಚೈಲ್ಡ್ ಮತ್ತು ಅಡೋಲೆಸೆಂಟ್ ಹೆಲ್ತ್‌ನಲ್ಲಿ ಪ್ರಕಟವಾದ ಹೊಸ ಅಂಕಿ- ಅಂಶಗಳಿಂದ ತಿಳಿದುಬಂದಿದೆ.
ಆದರೆ, ಭಾರತ ಸರ್ಕಾರದ ಅಂಕಿ- ಅಂಶಗಳು ಈ ಅಂಕಿ ಅಂಶಗಳನ್ನು ನಿರಾಕರಿಸುತ್ತವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಬಾಲ್ ಸ್ವರಾಜ್ - ಕೋವಿಡ್ ಕೇರ್ ಪೋರ್ಟಲ್ ಪ್ರಕಾರ, ಈ ಸಂಖ್ಯೆ 1.5 ಲಕ್ಷ ಇದೆ. ಜಾಗತಿಕವಾಗಿ, ಈ ಸಂಖ್ಯೆ 5.2 ಮಿಲಿಯನ್ಗಿಂತ ಹೆಚ್ಚಿದೆ. ತಲಾವಾರು ಅಂದಾಜು ಅನಾಥ ಪ್ರಕರಣಗಳ ಲೆಕ್ಕಾಚಾರಗಳಲ್ಲಿ ಪೆರು ಮತ್ತು ದಕ್ಷಿಣ ಆಫ್ರಿಕಾದಲ್ಲಿ ಈ ಪ್ರಮಾಣ ಅತಿ ಹೆಚ್ಚಾಗಿ ಕಂಡುಬಂದಿದೆ. ಪ್ರತಿ 1,000 ಮಕ್ಕಳಲ್ಲಿ ಕ್ರಮವಾಗಿ 7 ರಿಂದ 8 ಮಕ್ಕಳು ಕೊರೊನಾದಿಂದ ಪಾಲಕರನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಸಾವಿಗೀಡಾದ ಪ್ರತಿ ವ್ಯಕ್ತಿಗೆ, ಕನಿಷ್ಠ ಒಂದು ಮಗು ಅನಾಥವಾಗಿದೆ ಅಥವಾ ಆರೈಕೆದಾರನನ್ನು ಕಳೆದುಕೊಳ್ಳುತ್ತದೆ ಎಂದು ನಾವು ಅಂದಾಜು ಮಾಡಿದ್ದೇವೆ ಎಂದು ಅಮೆರಿಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಯ ಪ್ರಮುಖ ಲೇಖಕ ಡಾ. ಸೂಸನ್ ಹಿಲ್ಲಿಸ್ ಹೇಳಿದ್ದಾರೆ.
14 ಕೋಟಿ ಮಕ್ಕಳು ಅನಾಥ: ಕೋವಿಡ್ ಸಾಂಕ್ರಾಮಿಕದ ಮೊದಲು ಪ್ರಪಂಚದಾದ್ಯಂತ ಅಂದಾಜು 140 ಮಿಲಿಯನ್ ಅನಾಥ ಮಕ್ಕಳಿದ್ದರು. ಇನ್ನು ಕೋವಿಡ್ ತರುವಾಯ ಮಾರ್ಚ್ 2020 ಮತ್ತು ಏಪ್ರಿಲ್ 2021 ರ ನಡುವೆ 1.5 ಮಿಲಿಯನ್ ಮಕ್ಕಳು ಅನಾಥರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹಿಜಾಬ್ ತೀರ್ಪು ಕಾಯ್ದಿರಿಸಿದ ಹೈಕೋರ್ಟ್: ಕೊನೆಯ ದಿನ ನಡೆದ ವಾದ-ಪ್ರತಿವಾದಗಳೇನು!?
ಆದರೆ, ಹೊಸ ಅಧ್ಯಯನವು ಈ ಅಂದಾಜನ್ನು ಅದೇ ಅವಧಿಗೆ ಸಂಬಂಧಿಸಿದಂತೆ 2.7 ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳು ಅನಾಥರಾಗಿದ್ದಾರೆ ಎಂದು ತಿಳಿಸಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಇಂಪೀರಿಯಲ್ ಕಾಲೇಜ್ ಲಂಡನ್ (UK) ನ ಪ್ರಮುಖ ಲೇಖಕರಾದ ಡಾ ಜೂಲಿಯೆಟ್ ಅನ್ವಿನ್, ಅಂದಾಜುಗಳು ಪ್ರಸ್ತುತ ವರದಿ ಮಾಡಲ್ಪಟ್ಟಿರುವುದಕ್ಕಿಂತ 10 ಪಟ್ಟು ಹೆಚ್ಚಾಗಿರುತ್ತದೆ ಎಂದಿದ್ದಾರೆ.
ಅನಾಥರಾದ ಮೂವರಲ್ಲಿ ಇಬ್ಬರು ಮಕ್ಕಳು 10 ರಿಂದ 17 ವರ್ಷ ವಯಸ್ಸಿನವರು: ಇನ್ನು ಕೋವಿಡ್‌ನಿಂದ ಅನಾಥರಾದ ಮೂವರಲ್ಲಿ ಇಬ್ಬರು ಮಕ್ಕಳು 10 ರಿಂದ 17 ವರ್ಷ ವಯಸ್ಸಿನ ಹದಿಹರೆಯದವರಾಗಿದ್ದಾರೆ ಎಂದು ಜಾಗತಿಕ ಅಧ್ಯಯನ ಸೂಚಿಸುತ್ತದೆ. ಇದಲ್ಲದೇ, ಕೋವಿಡ್ ಸಾವುಗಳು ಪುರುಷರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂಬುದಕ್ಕೆ ಸಾಕ್ಷಿ ಎಂಬಂತೆ ವಿಶ್ವದಾದ್ಯಂತ ನಾಲ್ಕು ಮಕ್ಕಳಲ್ಲಿ ಮೂವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ.
ಪೋಷಕರನ್ನು ಕಳೆದುಕೊಂಡಿರುವ ಮಕ್ಕಳು ಬಡತನ, ಶೋಷಣೆ ಮತ್ತು ಲೈಂಗಿಕ ಹಿಂಸೆ ಅಥವಾ ನಿಂದನೆ, HIV ಸೋಂಕು, ಮಾನಸಿಕ ಆರೋಗ್ಯ ಸವಾಲುಗಳು ಮತ್ತು ತೀವ್ರ ತೊಂದರೆಯ ಅಪಾಯವನ್ನು ಎದುರಿಸಬೇಕಾಗಬಹುದು. ಕೆಲವು ಸಂದರ್ಭಗಳಲ್ಲಿ, ಗುಂಪು ಒಳಗೊಳ್ಳುವಿಕೆ ಮತ್ತು ಹಿಂಸಾತ್ಮಕ ಉಗ್ರವಾದಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಇದನ್ನು ತಡೆಯುವಲ್ಲಿ ಸಂಬಂಧಿಸಿದವರು ಸರಿಯಾದ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸೂಚಿಸಿದ್ದಾರೆ.