19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಅಡುಗೆ ಅನಿಲ ದರದಲ್ಲಿ ಇದೀಗ ಮತ್ತಷ್ಟು ಏರಿಕೆ ಮಾಡಲಾಗಿದೆ. ಈ ಮೂಲಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಸಂಕಷ್ಟದ ನಡುವೆ ಗ್ರಾಹಕರ ಜೇಬಿಗೆ ಮತ್ತೆ ಹೊರೆ ಬಿದ್ದಿದೆ. ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯಲ್ಲಿ 250 ರೂ ಏರಿಕೆ ಮಾಡಲಾಗಿದ್ದು, ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದೆ.
ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಕಂಡು ಬಂದಿಲ್ಲ. ಆದರೆ, ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿರುವ ಕಾರಣ ಇದೀಗ ಗ್ರಾಹಕರು 250 ಹೆಚ್ಚುವರಿ ಸೇರಿದಂತೆ 2,253 ರೂ. ಪಾವತಿ ಮಾಡಬೇಕಾಗಿದೆ.
ಇದನ್ನೂ ಓದಿ: ಐಪಿಎಲ್‌ನಲ್ಲಿಂದು ಪಂಜಾಬ್-ಕೋಲ್ಕತ್ತಾ ಫೈಟ್: ಗೆಲುವಿನ ಉತ್ಸಾಹದಲ್ಲಿ ಮಯಾಂಕ್-ಶ್ರೇಯಸ್
ಕಳೆದ ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 105 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಗಣನೀಯವಾದ ಹೆಚ್ಚಳ ಕಂಡು ಬರುತ್ತಿರುವ ಕಾರಣ ಅನಿಲ ಬೆಲೆ ಜಾಸ್ತಿಯಾಗಿದೆ. ಮುಂಬರುವ ದಿನಗಳಲ್ಲಿ ಅಡುಗೆ ಅನಿಲ ದರದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಪಂಚರಾಜ್ಯ ಚುನಾವಣೆಗಳು ಮುಕ್ತಾಯಗೊಂಡ ಬಳಿಕ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಗನ ಮುಖಿಯಾಗುತ್ತಾ ಸಾಗಿದೆ.