ತಿರುವನಂತಪುರಂ(ಕೇರಳ): ಕೋವಿಡ್-19 ಸೋಂಕಿನ ಹಾವಳಿ ನಡುವೆಯೂ ಕೇರಳದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಉದ್ಯಮದಲ್ಲಿ 181 ಹೊಸ ಕಂಪನಿಗಳು ಸ್ಥಾಪನೆ ಆಗಿವೆ ಮತ್ತು ಸುಮಾರು 10,400 ಹೊಸ ಉದ್ಯೋಗಗಳು ಸೃಷ್ಟಿಸಿಯಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಬಿಕ್ಕಟ್ಟನ್ನು ಎದುರಿಸುವುದೊಂದಿಗೆ ಅಭಿವೃದ್ಧಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗಿದೆ. ಪ್ರಮುಖವಾಗಿ ಐಟಿ ಪಾರ್ಕ್‌ಗಳ ಮೇಲೆ ಕೇಂದ್ರೀಕರಿಸಿ ಸರ್ಕಾರವು ನೀಡಿದ ವಿವಿಧ ರಿಯಾಯ್ತಿಗಳನ್ನು ನೀಡುತ್ತಿದೆ.
ಈಗಾಗಲೇ ಅಸ್ತಿತ್ವದಲ್ಲಿರುವ ಉದ್ಯಮಗಳನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೇ, ಹೊಸ ಕಂಪನಿಗಳನ್ನು ಆಕರ್ಷಿಸಲೂ ಪ್ರಯತ್ನಿಸಲಾಗಿದೆ. ಕೋವಿಡ್ ಅವಧಿಯಲ್ಲೇ ರಾಜ್ಯದಲ್ಲಿ ಒಟ್ಟಾರೆ 181 ಹೊಸ ಕಂಪನಿಗಳು ಸ್ಥಾಪನೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ತಿರುವನಂತಪುರಂ ಟೆಕ್ನೋಪಾರ್ಕ್‌ನಲ್ಲಿ 41 ಕಂಪನಿಗಳು, ಕೊಚ್ಚಿ ಇನ್ಫೋಪಾರ್ಕ್‌ನಲ್ಲಿ 100 ಮತ್ತು ಕೋಯಿಕ್ಕೋಡ್‌ನ ಸೈಬರ್ ಪಾರ್ಕ್‌ನಲ್ಲಿ 40 ಹೊಸ ಕಂಪನಿಗಳು ಅಸ್ತಿತ್ವಕ್ಕೆ ಬಂದಿವೆ. ಇದೇ ಅವಧಿಯಲ್ಲಿ ಐಟಿ ಕಂಪನಿಗಳಲ್ಲಿ 10,400 ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ ಎಂದು ಸಿಎಂ ವಿಜಯನ್ ಮಾಹಿತಿ ನೀಡಿದ್ದಾರೆ.
ಉದ್ಯಮದ ವಾತಾವರಣ ಸುಧಾರಿಸಲು ಮೂಲಸೌಕರ್ಯಗಳನ್ನ ಕಲ್ಪಿಸಲಾಗುತ್ತಿದೆ. ಜತೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಐಟಿ ಕಂಪನಿಗಳನ್ನು ಆಕರ್ಷಿಸಲು ಉತ್ತಮವಾದ ಕಾರ್ಯವಿಧಾನಗಳನ್ನು ಪರಿಚಯಿಸುತ್ತಿದ್ದೇವೆ. ಅಲ್ಲದೇ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.
ನಮ್ಮ ರಾಜ್ಯ ಸರ್ಕಾರವು ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲೂ ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ. ಪ್ರಮುಖವಾಗಿ ಕಣ್ಣೂರಿನಲ್ಲಿ ಹೊಸ ಐಟಿ ಪಾರ್ಕ್, ಕೊಲ್ಲಂನಲ್ಲಿ ಐದು ಲಕ್ಷ ಚದರಡಿ ಐಟಿ ಮತ್ತು ಸ್ಯಾಟ್‌ಲೈಟ್ ಪಾರ್ಕ್ ಘೋಷಣೆ ಮಾಡಲಾಗಿದೆ ಎಂದು ಕೇರಳ ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಇದೇ ಮೊದಲು : ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಚಿನ್ನದ ಎಟಿಎಂಗಳು ಲಭ್ಯ