ವೈಶಾಲಿ(ಬಿಹಾರ): ಪ್ರತಿ ಕುಟುಂಬವೂ ಶೌಚಾಲಯ ಹೊಂದಬೇಕು ಎಂದು ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಕೇಂದ್ರ ಸರ್ಕಾರವೇ ಅನುದಾನ ನೀಡಿ ಶೌಚಾಲಯ ಕಟ್ಟಿಸಿಕೊಡುತ್ತಿದೆ. ಆದರೆ, ಕೆಲ ಜನರಲ್ಲಿ ಮಾತ್ರ ಈ ಬಗ್ಗೆ ಅರಿವು ಮೂಡಿಲ್ಲ. ಅದರಲ್ಲೂ ಹಳ್ಳಿಗಳಲ್ಲಿ ಇದು ತುಸು ಹೆಚ್ಚೇ ಎಂದು ಹೇಳಬಹುದು. ಸ್ವಚ್ಛತೆಗಾಗಿ ಬಳಸುವ ಶೌಚಾಲಯ ವ್ಯವಸ್ಥೆಯನ್ನು ಪ್ರಾಚೀನ ಯುಗದಲ್ಲೇ ಬಳಕೆ ಮಾಡಲಾಗುತ್ತಿತ್ತು ಎಂಬುದಕ್ಕೆ ಬಿಹಾರದ ವೈಶಾಲಿಯ ವಸ್ತು ಸಂಗ್ರಹಾಲಯದಲ್ಲಿರುವ 'ಟಾಯ್ಲೆಟ್ ಪ್ಯಾನ್' ಸಾಕ್ಷಿಯಾಗಿದೆ.
ಹೌದು, ಬಿಹಾರದ ವೈಶಾಲಿಯಲ್ಲಿ 1800 ವರ್ಷಗಳ ಹಿಂದೆ ಬಳಸಿದ್ದ ಶೌಚಾಲಯದ 'ಪ್ಯಾನ್' ಅನ್ನು ಸಂಗ್ರಹಿಸಿಡಲಾಗಿದೆ. ಇದರ ವ್ಯಾಸವು 88 ಸೆಂ.ಮೀ. ಉದ್ದ ಮತ್ತು 7 ಸೆಂ.ಮೀ. ದಪ್ಪವಾಗಿದೆ. ಈ ಟಾಯ್ಲೆಟ್ನ ಮಾದರಿಯಲ್ಲಿ ಎರಡು ರಂಧ್ರಗಳಿವೆ. ಒಂದನ್ನು ಮೂತ್ರ ವಿರ್ಜನೆಗೆ ಬಳಸಿದರೆ, ಇನ್ನೊಂದನ್ನು ಮಲ ವಿಸರ್ಜನೆಗೆ ಬಳಸಲಾಗುತ್ತಿತ್ತು ಎಂದು ಗುರುತಿಸಲಾಗಿದೆ.
ಟಾಯ್ಲೆಟ್ನಿಂದ ಒಳಚರಂಡಿಗೆ ಲಿಂಕ್ ವ್ಯವಸ್ಥೆ: ಇದರ ನಿಖರ ಅವಧಿಯನ್ನು ಗುರುತಿಸಲಾಗದಿದ್ದರೂ 1 ಅಥವಾ 2 ನೇ ಶತಮಾನಕ್ಕೆ ಇದು ಸೇರಿದೆ ಎಂದು ಅಂದಾಜಿಸಲಾಗಿದೆ. ಟೆರಾಕೋಟಾ ಟಾಯ್ಲೆಟ್ ಪ್ಯಾನ್ಅನ್ನು ಮೂರು ಭಾಗಗಳಾಗಿ ಜೋಡಿಸಿಡಲಾಗಿದೆ. ಕಾಲುಗಳನ್ನು ಇಡಲು ಪಾದದ ಕೆಳಗೆ ದೊಡ್ಡದಾದ ಕಲ್ಲುಗಳನ್ನು ಜೋಡಿಸಿದೆ. ಇಂದಿನ ಟಾಯ್ಲೆಟ್ ಪ್ಯಾನ್ನಂತೆ ಅದರಲ್ಲಿ ಕುಳಿತು ಮಲವಿಸರ್ಜನೆ ಮಾಡುವ ವ್ಯವಸ್ಥೆ ಇದೆ. ಈ ಪ್ಯಾನ್ ಅಡಿಯಲ್ಲಿ ರಿಂಗ್ ವೆಲ್ ಇದ್ದು, ಅದರ ಮೂಲಕ ನೀರು ಒಳಚರಂಡಿ ಸೇರುತ್ತಿತ್ತು ಎಂದು ಅಂದಾಜಿಸಲಾಗಿದೆ.
ಇದು ಬೌದ್ಧ ಸನ್ಯಾಸಿಗಳ ಟಾಯ್ಲೆಟ್: ಈ ಟಾಯ್ಲೆಟ್ ಪ್ಯಾನ್ ವೈಶಾಲಿಯಲ್ಲಿ ಉತ್ಖನನ ಮಾಡುವಾಗ ಸಿಕ್ಕಿದೆ. ಟಾಯ್ಲೆಟ್ ಪ್ಯಾನ್ ಗಾತ್ರವನ್ನು ಆಧರಿಸಿ ಇದು ಬೌದ್ಧ ಮಹಿಳಾ ಸನ್ಯಾಸಿಗಳ ಬಳಕೆಗಾಗಿ ರೂಪಿಸಲಾಗಿತ್ತು ಎಂದು ಹೇಳಲಾಗ್ತಿದೆ. ಬೌದ್ಧ ಸನ್ಯಾಸಿಗಳು ಸ್ವಚ್ಛತೆಗೆ ಹೆಚ್ಚು ಗಮನ ಕೊಡುತ್ತಿದ್ದರು. ವೈಶಾಲಿಯಲ್ಲಿ 2 ಆಸ್ಪತ್ರೆಗಳು ಕೂಡ ಇದ್ದವು ಎಂಬುದನ್ನು ಬೌದ್ಧ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ. ಉತ್ಖನನದ ವೇಳೆ ಈ ಎಲ್ಲಾ ಅಂಶಗಳು ಬೆಳಕಿಗೆ ಬಂದಿವೆ. ಈ ವೇಳೆ ಶೌಚಾಲಯದ ಮಾದರಿಯೂ ದೊರೆತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಭಾರತದಲ್ಲಿ ಶೌಚಾಲಯಗಳ ಬಳಕೆಯ ಇತಿಹಾಸ 3000 ವರ್ಷಗಳಷ್ಟು ಹಳೆಯದಾಗಿದೆ. ಸಿಂಧೂ ನಾಗರಿಕತೆಯ ಕಾಲದಲ್ಲೂ ಶೌಚಾಲಯ ಬಳಕೆ ಮಾಡಲಾಗುತ್ತಿತ್ತು ಎಂಬುದಕ್ಕೆ ಲೋಥಾಲ್ನಲ್ಲಿ ದೊರೆತ ಕುರುಹುಗಳೇ ಸಾಕ್ಷಿಯಾಗಿವೆ. ವೈಶಾಲಿ ಮ್ಯೂಸಿಯಂನಲ್ಲಿ ಇರಿಸಲಾಗಿರುವ ಟಾಯ್ಲೆಟ್ ಪ್ಯಾನ್ ಕುಶಾಣರ ಕಾಲದ್ದು ಎಂದು ಅಂದಾಜಿಸಲಾಗಿದೆ.
ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಅಂಗೈ ಕಳೆದುಕೊಂಡ ಮಗು: 20 ವರ್ಷಗಳ ಬಳಿಕ ಸಿಕ್ತು ನ್ಯಾಯ