ವಿಲ್ಲುಪುರಂ (ತಮಿಳುನಾಡು): ತಮಿಳುನಾಡಿನಲ್ಲಿ ವಿವಾದಿತ ಸ್ವಾಮಿ ನಿತ್ಯಾನಂದರ 18 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ನಿತ್ಯಾನಂದರ ಶಿಷ್ಯ ಬಾಲಸುಬ್ರಮಣ್ಯಂ ಎಂಬುವವರು ಈ ಪ್ರತಿಮೆ ನಿರ್ಮಿಸಿದ್ದು, ಕುಂಭಾಭಿಷೇಕದ ಮೂಲಕ ಅನಾವರಣಗೊಳಿಸಲಾಗಿದೆ.
ವಿಲ್ಲುಪುರಂ ಜಿಲ್ಲೆಯ ವನೂರಿನ ಪೆರಂಬೈ ಗ್ರಾಮದ ಸಮೀಪದಲ್ಲಿರುವ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಶಿವ ರೂಪದಲ್ಲಿ ನಿತ್ಯಾನಂದರ ಪ್ರತಿಮೆ ಸ್ಥಾಪಿಸಿದ್ದು, ಹುಲಿಯ ಚರ್ಮದ ಧರಿಸು ಮತ್ತು ಕೈಯಲ್ಲಿ ತ್ರಿಶೂಲ ಇದೆ. ಆದರೆ, ದೇವಸ್ಥಾನದಲ್ಲಿ ಕುಂಭಾಭಿಷೇಕ ಸುದ್ದಿ ತಿಳಿದ ಗ್ರಾಮಸ್ಥರು ಮತ್ತು ಭಕ್ತರು ಈ ಪ್ರತಿಮೆ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ನಿತ್ಯಾನಂದರ ಪ್ರತಿಮೆ ನೋಡಿದ ಅಧಿಕಾರಿಗಳು ಮತ್ತು ಪೊಲೀಸರು ಕೂಡ ಅಚ್ಚರಿಗೊಂಡಿದ್ದಾರೆ. ಶಿವನ ರೂಪದಲ್ಲಿ ಪ್ರತಿಮೆ ನಿರ್ಮಿಸಿರುವುದಕ್ಕೆ ಕೆಲ ಭಕ್ತರು ಆಕ್ಷೇಪ ಹೊರಹಾಕಿದ್ದು, ಇದರಿಂದ ಗೊಂದಲ ವಾತಾವರಣ ಉಂಟಾಗಿತ್ತು. ಈ ಕುರಿತು ಕುಂಭಾಭಿಷೇಕ ಮಾಡಿದ ಶಿವಾಚಾರ್ಯರಿಗೆ ಕೇಳಿದಾಗ ಇದು ಶಿವನ ಮತ್ತೊಂದು ಅವತಾರವಾದ ಬೈರವ ರೂಪವಾಗಿದೆ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲ, ದೇವಸ್ಥಾನದ ಆಡಳಿತಾಧಿಕಾರಿಯಾದ ಬಾಲಸುಬ್ರಮಣ್ಯಂ ಕೊಠಡಿಯೊಳಗೆ ಸಾರ್ವಜನಿಕರು ಹೋಗಿ ನೋಡಿದ್ದಾರೆ. ಆಗ ಅಲ್ಲಿ ನಿತ್ಯಾನಂದ ಆಶೀರ್ವಾದ ಮಾಡುತ್ತಿರುವ ಹಲವು ಫೋಟೋಗಳು ಕಂಡಿವೆ. ನಿತ್ಯಾನಂದನ ಫೋಟೋಗಳಿಗೆ ಪೂಜೆ ಮಾಡಿರುವುದು ಕೂಡ ಬಹಿರಂಗವಾಗಿದೆ.
ಇದನ್ನೂ ಓದಿ: ಮಾಂತ್ರಿಕ ಶಕ್ತಿಯಿಂದ ಮಹಿಳೆಯರನ್ನು ಸೆಳೆಯುವ ಅರ್ಚಕ.. ಪತ್ನಿಯೇ ಹೊರಹಾಕಿದ್ರು ಗಂಡನ ಕರಾಳ ಮುಖ