ನವದೆಹಲಿ : 2016-2020 ರ ನಡುವೆ ನಡೆದ ಚುನಾವಣೆಯ ಸಂದರ್ಭಗಳಲ್ಲಿ 170 ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಇತರ ಪಕ್ಷಗಳಿಗೆ ಸೇರ್ಪಡೆಯಾಗಿದ್ದು, ಕೇವಲ 18 ಬಿಜೆಪಿ ಶಾಸಕರು ಮಾತ್ರ ಈ ಅವಧಿಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಪಕ್ಷ ತೊರೆದಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನ ಸಮೀಕ್ಷಾ ವರದಿಯಿಂದ ತಿಳಿದು ಬಂದಿದೆ.
ಎಡಿಆರ್ನ ಹೊಸ ವರದಿ ಪ್ರಕಾರ, 2016-20ರ ನಡುವೆ ರಾಜಕೀಯ ಪಕ್ಷಗಳನ್ನು ಬದಲಾಯಿಸಿದ 405 ಶಾಸಕರ ಪೈಕಿ, 182 ಮಂದಿ ಭಾರತೀಯ ಜನತಾ ಪಕ್ಷ (ಬಿಜೆಪಿ), 38 ಮಂದಿ ಕಾಂಗ್ರೆಸ್ ಹಾಗೂ 25 ಮಂದಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಗೆ ಸೇರ್ಪಡೆಗೊಂಡಿದ್ದಾರೆ.
2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಐವರು ಲೋಕಸಭಾ ಸದಸ್ಯರು ಬಿಜೆಪಿ ತೊರೆದು ಇತರ ಪಕ್ಷಗಳಿಗೆ ಸೇರ್ಪಡೆಗೊಂಡಿದ್ದು, 2016-20 ನಡುವೆ ಏಳು ಮಂದಿ ರಾಜ್ಯಸಭಾ ಸದಸ್ಯರು ಕಾಂಗ್ರೆಸ್ ತೊರೆದು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ. 2016-20 ರ ನಡುವೆ 170 ಕಾಂಗ್ರೆಸ್ ಶಾಸಕರು ಮತ್ತು 18 ಬಿಜೆಪಿ ಶಾಸಕರು ಪಕ್ಷ ತೊರದಿದ್ದಾರೆ ಎಂದು ವರದಿ ತಿಳಿಸಿದೆ.
ಓದಿ : ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ನಡೆದಿರುವುದಾಗಿ ಆರೋಪಿಸಿ ಟಿಎಂಸಿ ಪ್ರತಿಭಟನೆ
ಮಧ್ಯಪ್ರದೇಶ, ಮಣಿಪುರ, ಗೋವಾ, ಅರುಣಾಚಲ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಇತ್ತೀಚೆಗೆ ಸರ್ಕಾರಗಳು ಪತನಗೊಂಡಿರುವುದು ಆಡಳಿತ ಪಕ್ಷದ ಶಾಸಕರ ಪಕ್ಷಾಂತರದಿಂದಾಗಿ ಎಂಬುದು ಗಮನಿಸಬೇಕಾದ ಅಂಶ. 2016-2020ರ ನಡುವೆ, ರಾಜಕೀಯ ಪಕ್ಷಗಳನ್ನು ಬದಲಾಯಿಸಿದ 16 ಮಂದಿ ರಾಜ್ಯಸಭಾ ಸಂಸದರಲ್ಲಿ 10 ಮಂದಿ ಬಿಜೆಪಿ ಸೇರಿದ್ದು, 12 ಲೋಕಸಭಾ ಸಂಸದರಲ್ಲಿ ಐವರು 2019 ರ ಸಂಸತ್ ಚುನಾವಣೆಯ ಸಂದರ್ಭ ಕಾಂಗ್ರೆಸ್ ಸೇರಿದ್ದಾರೆ ಎಂದು ವರದಿ ಹೇಳಿದೆ.
ಯಾರು ಪಕ್ಷಗಳನ್ನು ಬದಲಾಯಿಸಿದ್ದಾರೆ ಮತ್ತು ಕಳೆದ ಐದು ವರ್ಷಗಳಲ್ಲಿ ನಡೆದ ಮರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂಬ ಸಮೀಕ್ಷೆ ನಡೆಸಲು, ರಾಷ್ಟ್ರೀಯ ಚುನಾವಣಾ ಕಣ್ಗಾವಲು ಮತ್ತು ಎಡಿಆರ್ 433 ಸಂಸದರು ಮತ್ತು ಶಾಸಕರ ಸ್ವಯಂ-ಪ್ರಮಾಣವಚನ ಅಫಿಡವಿಟ್ಗಳನ್ನು ವಿಶ್ಲೇಷಿಸಿದೆ.