ಥಾಣೆ(ಮಹಾರಾಷ್ಟ್ರ) : ಇಲ್ಲಿನ ಥಾಣೆಯ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಸಾವಿನ ಕೇಕೆ ಸದ್ದು ಮಾಡುತ್ತಿದೆ. ಆಸ್ಪತ್ರೆಯಲ್ಲಿ ಕಳೆದ 12 ತಾಸಿನಲ್ಲಿ 17 ರೋಗಿಗಳು ನಾನಾ ಕಾರಣಗಳಿಗಾಗಿ ಸಾವನ್ನಪ್ಪಿದ್ದಾರೆ. ಇದರಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ 12 ರೋಗಿಗಳು ಹಾಗೂ ಇತರ ವಿಭಾಗದ ಐವರು ರೋಗಿಗಳು ಜೀವ ಬಿಟ್ಟಿದ್ದಾರೆ.
ಇದು ಆಸ್ಪತ್ರೆಯ ಚಿಕಿತ್ಸಾ ವ್ಯವಸ್ಥೆಯ ಮೇಲೆ ಭಾರೀ ಅನುಮಾನ ಮೂಡಿಸಿದೆ. ಅಲ್ಲದೇ, ಒಂದೇ ದಿನದ ಅಂತರದಲ್ಲಿ ಇಷ್ಟು ರೋಗಿಗಳು ಸಾವನ್ನಪ್ಪಿದ್ದು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆ ಆಡಳಿತದಲ್ಲಿ ಅವ್ಯವಸ್ಥೆ, ವೈದ್ಯ ಸಿಬ್ಬಂದಿ ಕೊರತೆ ಮತ್ತು ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳದಿಂದಾಗಿ ಆಸ್ಪತ್ರೆ ವಿವಾದಕ್ಕೆ ಸಿಲುಕಿದೆ.
ಶನಿವಾರ ರಾತ್ರಿಯಿಂದ ಈವರೆಗೂ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಆಸ್ಪತ್ರೆ ಆಡಳಿತ ಮಂಡಳಿಯೇ ಖಚಿತಪಡಿಸಿದೆ. ಕೊನೆ ಕ್ಷಣದಲ್ಲಿ ಖಾಸಗಿ ಆಸ್ಪತ್ರೆಯಿಂದ ಬಂದ ರೋಗಿಗಳು, 80 ವರ್ಷ ಮೇಲ್ಪಟ್ಟವರು ಇದರಲ್ಲಿದ್ದಾರೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.
ವೈದ್ಯಕೀಯ ಸೌಲಭ್ಯಗಳ ಕೊರತೆ ಕಾರಣ?: ಥಾಣೆಯಲ್ಲಿದ್ದ ಜಿಲ್ಲಾ ಆಸ್ಪತ್ರೆಯನ್ನು ಮುಚ್ಚಿರುವುದರಿಂದ ಜಿಲ್ಲೆಯ ಎಲ್ಲ ರೋಗಿಗಳು ಇಲ್ಲಿಗೆ ಬರುವುದರಿಂದ ವೈದ್ಯರು ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾಗಿದೆ. ಈ ಹಿಂದೆ ಆಗಸ್ಟ್ 10 ರಂದು ಒಂದೇ ದಿನ ಒಂದೇ ಆಸ್ಪತ್ರೆಯಲ್ಲಿ 5 ಮಂದಿ ಸಾವನ್ನಪ್ಪಿದ್ದರು. ಘಟನೆಯ ಬಳಿಕ ಶಾಸಕ ಜಿತೇಂದ್ರ ಅವದ್ ಹಾಗೂ ಇತರ ಪಕ್ಷಗಳ ಮುಖಂಡರು ಆಸ್ಪತ್ರೆಗೆ ತೆರಳಿ ಪ್ರತಿಭಟನೆ ನಡೆಸಿದ್ದರು.
ಸಿಎಂ ಜಿಲ್ಲೆಯಲ್ಲಿ ಮರಣ ಮೃದಂಗ: ಥಾಣೆ ಜಿಲ್ಲೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ತವರು ಜಿಲ್ಲೆಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆ ಇರುವುದೂ ಇಲ್ಲೇ. ಶನಿವಾರ ರಾತ್ರಿ 10.30ರಿಂದ ಬೆಳಗ್ಗೆ 8.30ರ ವರೆಗೆ 17 ಮಂದಿ ಮೃತಪಟ್ಟಿದ್ದರಿಂದ ಜಿಲ್ಲೆಯಲ್ಲಿ ಸಂಚಲನ ಉಂಟಾಗಿದೆ. ವಿಶೇಷ ಅಂದ್ರೆ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿಯಂತ್ರಣದಲ್ಲಿದೆ. ಶಿವಸೇನೆಯೇ ಇಲ್ಲಿ ಆಡಳಿತ ನಡೆಸುತ್ತಿದೆ. ಹಾಗಾಗಿ ಮಹಾನಗರ ಪಾಲಿಕೆಯ ಛತ್ರಪತಿ ಶಿವಾಜಿ ಆಸ್ಪತ್ರೆಯಲ್ಲಿ ನಡೆದ ಸರಣಿ ಸಾವು ಶಿಂಧೆ ಗುಂಪಿನ ಶಿವಸೇನೆಗೆ ಭಾರಿ ಮುಜುಗರ ತಂದಿದೆ.
ಆಸ್ಪತ್ರೆ ಡೀನ್ ಅಮಾನತು: ಕೆಲ ತಿಂಗಳ ಹಿಂದೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಪರಿಶೀಲಿಸಿ ಡೀನ್ (ಮುಖ್ಯಸ್ಥ) ವಿರುದ್ಧ ಅಮಾನತು ಕ್ರಮ ಜರುಗಿಸಲಾಗಿತ್ತು. ಇದೇ ವೇಳೆ ಕೆಲ ದಿನಗಳ ಹಿಂದೆ ಸಿವಿಲ್ ಆಸ್ಪತ್ರೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಇದರಿಂದ ಈ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಥಾಣೆಯಲ್ಲಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಗೆ ಭೂಮಿಪೂಜೆ ನೆರವೇರಿಸಿದ್ದರು. ಜಿಲ್ಲಾ ಆಸ್ಪತ್ರೆಯ ಕಟ್ಟಡವನ್ನು ಕೆಡವಿ ಆ ಜಾಗದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಉದ್ದೇಶಿಸಲಾಗಿದೆ. ಇಷ್ಟೆಲ್ಲದರ ಮಧ್ಯೆ ಅತ್ಯಂತ ಹಳೆಯದಾದ ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಯಲ್ಲಿ ಈಗ ಸಂಭವಿಸಿದ ಸರಣಿ ಸಾವು ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: Hawaii wildfire: ಶತಮಾನದ ಭೀಕರ ಕಾಡ್ಗಿಚ್ಚಿಗೆ ಹವಾಯಿ ದ್ವೀಪ ಭಸ್ಮ.. 89 ಮಂದಿ ಅಗ್ನಿಗಾಹುತಿ