ನಾಡಿಯಾ (ಪಶ್ಚಿಮ ಬಂಗಾಳ): ಶವಸಂಸ್ಕಾರಕ್ಕೆಂದು ತೆರಳುತ್ತಿದ್ದ ವಾಹನ ಹಾಗೂ ಕಲ್ಲು ತುಂಬಿದ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 18 ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ, 5 ಮಂದಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಇಲ್ಲಿನ ಹಂಸಖಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ವರದಿಯಾಗಿದೆ.
ನಾಡಿಯಾ ಜಿಲ್ಲೆಯ ಫುಲ್ಬರಿ ರಾಜ್ಯ ಹೆದ್ದಾರಿಯಲ್ಲಿ ಕಳೆದ ರಾತ್ರಿ 12 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರು, ಮಹಿಳೆಯ ಶವವನ್ನು ಅಂತ್ಯಸಂಸ್ಕಾರಕ್ಕೆಂದು ಮೆಟಾಡೋರ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ದಟ್ಟವಾದ ಮಂಜು ಮತ್ತು ವಾಹನದ ಅತಿಯಾದ ವೇಗದಿಂದಾಗಿ ಶವ ಸಾಗಿಸುತ್ತಿದ್ದ ವಾಹನ ಕಲ್ಲು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಹಂಸಖಾಲಿ ಪೊಲೀಸರು ಗಾಯಾಳುಗಳನ್ನು ಶಕ್ತಿನಗರ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣದ ಪೊಲೀಸ್ ತನಿಖೆ ನಡೆಯುತ್ತಿದೆ.