ಪಾಟ್ನಾ(ಬಿಹಾರ) : ಬಿಹಾರದಲ್ಲಿ ಮದ್ಯ ನಿಷೇಧಿಸಿದ್ದರೂ ಔರಂಗಾಬಾದ್‌ನಲ್ಲಿ ನಕಲಿ ಮದ್ಯದ ಹಾವಳಿ ಹೆಚ್ಚಾಗಿದೆ. ಕಳೆದ 4 ದಿನದಲ್ಲಿ 17 ಜನರು ನಕಲಿ ಮದ್ಯ ಸೇವನೆಗೆ ಬಲಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಪಿಎಸ್ಐ, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಔರಂಗಾಬಾದ್‌ನಲ್ಲಿ ಮೂವರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದರು. ಇದಾದ ಮಾರನೇ ದಿನವೇ ಸಾವಿನ ಸಂಖ್ಯೆ 17ಕ್ಕೇರಿದೆ. ಇದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ಉಂಟು ಮಾಡಿದೆ.
ಕಳೆದ ನಾಲ್ಕು ದಿನಗಳಲ್ಲಿ ಔರಂಗಾಬಾದ್‌ನಲ್ಲಿ ಮೂವರು, ಮಾಧೇಪುರದಲ್ಲಿ ಇಬ್ಬರು, ಗಯಾದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮದ್ಯ ಸೇವಿಸಿ ಸಾವಿಗೀಡಾಗಿದ್ದಾರೆ ಎಂದು ಕೆಲ ಮೃತರ ಸಂಬಂಧಿಕರು ಒಪ್ಪಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಸಾವಿನ ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ನಕಲಿ ಮದ್ಯದ ಸಾವು ಗೊತ್ತಾಗಿದೆ. ಇದಾದ ಬಳಿಕ ಮದ್ಯ ಮಾರಾಟದ ವಿರುದ್ಧ ಪೊಲೀಸರು ದಾಳಿಯನ್ನು ತೀವ್ರಗೊಳಿಸಿದ್ದಾರೆ.
ಮದನ್‌ಪುರ ಬ್ಲಾಕ್‌ನ ಖಿರಿಯಾವಾನ್ ಗ್ರಾಮವೊಂದರಲ್ಲಿ 24 ಗಂಟೆಗಳಲ್ಲಿ 7 ಜನರು ಬಲಿಯಾಗಿದ್ದಾರೆ. ಇವರಲ್ಲಿ ನಕಲಿ ಮದ್ಯ ಸೇವಿಸಿ ಮೂವರು ಸಾವನ್ನಪ್ಪಿರುವುದನ್ನು ಸ್ವತಃ ಜಿಲ್ಲಾಧಿಕಾರಿ ಸೌರಭ್ ಜೋರ್ವಾಲ್ ಖಚಿತಪಡಿಸಿದ್ದಾರೆ.
ಇದೇ ವೇಳೆ, ಔರಂಗಾಬಾದ್‌ನಲ್ಲಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿರುವ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಸುನೀಲ್ ಕುಮಾರ್, ಕಟ್ಟುನಿಟ್ಟಿನ ಕಾರ್ಯಾಚರಣೆಗೆ ಸೂಚಿಸಿದ್ದಾರೆ. ಸಾವಿನ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಇದುವರೆಗೆ 17 ಮಂದಿಯನ್ನು ಬಂಧಿಸಿದ್ದಾರೆ.