ಜಮ್ಮು (ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದಲ್ಲಿ ವಾಸಿಸುವ ಕನಿಷ್ಠ 15 ಕಾಶ್ಮೀರಿ ಪಂಡಿತರ ಕುಟುಂಬಗಳು ಜಮ್ಮುವಿಗೆ ವಲಸೆ ಹೋಗಿವೆ. ಈ ತಿಂಗಳ ಆರಂಭದಲ್ಲಿ ತಮ್ಮದೇ ಸಮುದಾಯದ ಸದಸ್ಯ ಪುರನ್ ಕ್ರಿಶನ್ ಭಟ್ ಎಂಬುವರ ಹತ್ಯೆಯಾದ ನಂತರ ಕಾಶ್ಮೀರಿ ಪಂಡಿತರು ಶೋಪಿಯಾನ್ ತೊರೆಯುತ್ತಿದ್ದಾರೆ. ಅಕ್ಟೋಬರ್ 15 ರಂದು ಗುಂಡ್ ಶೋಪಿಯಾನ್ ಜಿಲ್ಲೆಯ ತಮ್ಮ ಪೂರ್ವಜರ ಮನೆಯ ಹೊರಗೆ ತಮ್ಮ ತೋಟದ ಉಸ್ತುವಾರಿಗೆ ಹೋದಾಗ ಭಟ್ ಅವರನ್ನು ಉಗ್ರರು ಹತ್ಯೆಗೈದಿದ್ದರು.
ಮೃತ ಭಟ್ ಅವರ ಅಂತ್ಯಕ್ರಿಯೆ ಅಕ್ಟೋಬರ್ 16 ರಂದು ಮುತ್ತಿ ಜಮ್ಮುವಿನಲ್ಲಿ ನಡೆದಿತ್ತು. ಈ ಹತ್ಯೆಯಿಂದ ಉಂಟಾದ ಭಯದಿಂದ ಚೌಧರಿ ಗುಂಡ್‌ನಲ್ಲಿರುವ 15 ಕಾಶ್ಮೀರಿ ಪಂಡಿತರ ಕುಟುಂಬಗಳು ಜಮ್ಮುವಿಗೆ ವಲಸೆ ಹೋಗುತ್ತಿವೆ ಎಂದು ಹತ್ಯೆಯಾದ ಪುರನ್ ಕ್ರಿಶನ್ ಭಟ್ ಅವರ ಸೋದರ ಮಾವ ಟಿಕೆ ಭಟ್ ಈಟಿವಿ ಭಾರತ್‌ಗೆ ತಮ್ಮ ಜಮ್ಮು ನಿವಾಸದಲ್ಲಿ ತಿಳಿಸಿದ್ದಾರೆ. 15 ಕುಟುಂಬಗಳು ಕಾಶ್ಮೀರದಲ್ಲಿ ವಾಸಿಸುತ್ತಿದ್ದವು ಮತ್ತು ಉಗ್ರವಾದವು ಉತ್ತುಂಗದಲ್ಲಿರುವಾಗಲೂ ಇಲ್ಲಿಯೇ ಉಳಿದುಕೊಂಡಿದ್ದವು. ಆದರೆ 1990 ರ ದಶಕದ ಆರಂಭದಲ್ಲಿ ನೂರಾರು ಪಂಡಿತರ ಕುಟುಂಬಗಳು ಜಮ್ಮು ಮತ್ತು ಭಾರತದ ಇತರ ಭಾಗಗಳಿಗೆ ವಲಸೆ ಬಂದವು ಎಂದು ಭಟ್ ಹೇಳಿದರು.
ಸಾವಿರಾರು ಜನ ಪಾಕಿಸ್ತಾನದ ವಿರುದ್ಧ ಅತ್ಯಂತ ಜೋರಾಗಿ ಘೋಷಣೆಗಳನ್ನು ಕೂಗುತ್ತ, ಭಟ್ ಅವರ ಎರಡು ಮಕ್ಕಳಾದ ಶ್ರೀಯಾ ಮತ್ತು ಶಾನು ಹಾಗೂ ಇತರ ಸಂಬಂಧಿಕರ ಉಪಸ್ಥಿತಿಯಲ್ಲಿ ಬಾನ್ ತಲಾಬ್ ಪ್ರದೇಶದಲ್ಲಿ ರವಿವಾರ ಭಟ್ ಅವರ ಅಂತ್ಯಕ್ರಿಯೆ ನಡೆದಿತ್ತು. ಕುಟುಂಬಕ್ಕೆ 50 ಲಕ್ಷ ಪರಿಹಾರ ಮತ್ತು ಮೃತರ ಪತ್ನಿಗೆ ಸರ್ಕಾರಿ ನೌಕರಿ ಸೇರಿದಂತೆ ಸೂಕ್ತ ಪರಿಹಾರ ನೀಡಬೇಕು, ಭದ್ರತಾ ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಕಣಿವೆಯಿಂದ ಹೊರಗೆ ಹಿಂದೂ ನೌಕರರನ್ನು ತಕ್ಷಣ ಸ್ಥಳಾಂತರಿಸಬೇಕು ಎಂದು ಈ ಸಂದರ್ಭದಲ್ಲಿ ನೆರೆದಿದ್ದವರು ಒತ್ತಾಯಿಸಿದರು.
ಹತ್ಯೆಗೀಡಾದ ಪುರನ್ ಕ್ರಿಶನ್ ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಆದರೂ ಆತನ ಹತ್ಯೆ ಮಾಡಿದ್ದೇಕೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಟಿ ಕೆ ಭಟ್ ಹೇಳಿದರು. ಚೌಧರಿ ಗುಂಡ್ ಶೋಪಿಯಾನ್‌ನಲ್ಲಿರುವ ಎಲ್ಲಾ 15 ಪಂಡಿತರ ಕುಟುಂಬಗಳು ಹತ್ಯೆಯ ನಂತರ ಜಮ್ಮುವಿಗೆ ವಲಸೆ ಹೋಗಿವೆ ಎಂಬ ಟಿಕೆ ಭಟ್ ಅವರ ಹೇಳಿಕೆಯನ್ನು ಜಮ್ಮುವಿನಲ್ಲಿ ವಾಸಿಸುತ್ತಿರುವ ಪುರನ್ ಕ್ರಿಶನ್ ಭಟ್ ಅವರ ಸೋದರ ಮಾವ ಅಶೋಕ್ ಜಿ ಕೂಡ ದೃಢಪಡಿಸಿದರು.
ಇದನ್ನೂ ಓದಿ: ಕಾಶ್ಮೀರಿ ಪಂಡಿತ ಸಹೋದರರ ಮೇಲೆ ಉಗ್ರರ ದಾಳಿ.. ಓರ್ವ ಬಲಿ, ಮತ್ತೋರ್ವನ ಸ್ಥಿತಿ ಗಂಭೀರ