ಇಂಫಾಲ, ಮಣಿಪುರ: ಜಿಲ್ಲೆಯ ಎರಡು ಗ್ರಾಮಗಳ ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಬಾಂಬ್‌ಗಳೊಂದಿಗೆ ಶಸ್ತ್ರಸಜ್ಜಿತವಾದ ಶಂಕಿತ ಕುಕಿ ಉಗ್ರಗಾಮಿಗಳು ದಾಳಿ ನಡೆಸಿರುವುದು ವರದಿಯಾಗಿದೆ. ಈ ದಾಳಿಯಲ್ಲಿ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫಯೆಂಗ್ ಮತ್ತು ಕಾಂಗ್‌ಚುಪ್ ಚಿಂಗ್‌ಖಾಂಗ್ ಎಂಬ ಎರಡು ಗ್ರಾಮಗಳಲ್ಲಿ ನೆಲೆಸಿದ್ದ ರಾಜ್ಯ ಪೊಲೀಸ್ ಮತ್ತು ಮಣಿಪುರ ರೈಫಲ್ಸ್‌ನ ಸಿಬ್ಬಂದಿ ಶುಕ್ರವಾರ ರಾತ್ರಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿಗೆ ಪ್ರತಿದಾಳಿ ನಡೆಸಿದ್ದರು. ಗುಂಡಿನ ದಾಳಿ ಬಳಿಕ ಉಗ್ರರನ್ನು ಹತ್ತಿರದ ಕುಕಿ ಬೆಟ್ಟಗಳತ್ತ ಓಡಿ ಹೋದರು ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಸುಮಾರು 15 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಇಂಫಾಲ್‌ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ರಾಜ್ ಮೆಡಿಸಿಟಿಗೆ ದಾಖಲಿಸಲಾಗಿದ್ದು, ಗಾಯಗೊಂಡ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಹೊಸ ದಾಳಿಯ ವರದಿಗಳು ಬಿಷ್ಣುಪುರ ಜಿಲ್ಲೆಯ ಪೊಂಬಿಖೋಕ್‌ನಿಂದ ವರದಿಯಾಗಿದೆಯಾದರೂ ಯಾವುದೇ ಸಾವುನೋವು ಅಥವಾ ಗಾಯಗಳ ವರದಿಯಾಗಿಲ್ಲ. ಮಣಿಪುರ ಪೊಲೀಸ್, ಗಡಿ ಭದ್ರತಾ ಪಡೆ ಮತ್ತು ಅಸ್ಸೋಂ ರೈಫಲ್ಸ್‌ನ ಸಂಯೋಜಿತ ತಂಡವು ಕಾಕ್ಚಿಂಗ್ ಜಿಲ್ಲೆಯ ಸುಗ್ನು-ಸೆರೌ ಪ್ರದೇಶದಲ್ಲಿ ಏಳು ಮೃತದೇಹಗಳನ್ನು ವಶಪಡಿಸಿಕೊಂಡಿದೆ. ಮೃತದೇಹಗಳನ್ನು ಜೆಎನ್‌ಐಎಂಎಸ್‌ನ ಶವಾಗಾರದಲ್ಲಿ ಇರಿಸಲಾಗಿದೆ. ಕಳೆದ ವಾರ ಸುಗ್ನುನಲ್ಲಿ ಶಸ್ತ್ರಸಜ್ಜಿತ ಕುಕಿ ಉಗ್ರಗಾಮಿಗಳು ಸುಗ್ನು ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಸುಮಾರು ಏಳು ಜನರು ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ರಾಜ್ಯದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 98 ಜನರು ಸಾವನ್ನಪ್ಪಿದ್ದಾರೆ ಮತ್ತು 310 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಒಟ್ಟು 37,450 ಜನರು ಪ್ರಸ್ತುತ 272 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಮೇ 3 ರಂದು ಮೊದಲು ಘರ್ಷಣೆಗಳು ಪ್ರಾರಂಭವಾದವು. ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೇಯಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದ ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದ್ದು, ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ರಾಜ್ಯದಲ್ಲಿ ಶಾಂತಿ ನೆಲೆಸಲು ಸುಮಾರು 10,000 ಸೇನೆ ಮತ್ತು ಅಸ್ಸೋಂ ರೈಫಲ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹದಿನೈದು ದಿನಗಳ ಕಾಲ ಸಾಪೇಕ್ಷ ವಿರಾಮದ ನಂತರ, ರಾಜ್ಯವು ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ಮತ್ತು ಗುಂಡಿನ ಚಕಮಕಿಗಳಿಗೆ ಸಾಕ್ಷಿಯಾಯಿತು.
ಓದಿ: ಕೋರಮಂಡಲ್ಗೆ ರೈಲಿಗೆ 'ಕರಾಳ ಶುಕ್ರವಾರ': 14 ವರ್ಷಗಳ ಹಿಂದೆ ಹಳಿತಪ್ಪಿ ನಡೆದಿತ್ತು ದುರಂತ!