ಅಹಮದಾಬಾದ್ (ಗುಜರಾತ್): ಇತ್ತೀಚಿಗೆ ಗುಜರಾತ್ನ ರಾಜ್ಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯು ಅಹಮದಾಬಾದ್ನಲ್ಲಿ 1400 ಕೋಟಿ ಬೃಹತ್ ಬಿಲ್ಲಿಂಗ್ ಹಗರಣವನ್ನು ಬಯಲಿಗೆಳದಿದೆ. ಈ ಹಗರಣದ ಮಾಸ್ಟರ್ ಮೈಂಡ್ ರಾಕೇಶ್ ಚೋಕ್ಸಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಹಗರಣದ ಬಗ್ಗೆ ಮಾತನಾಡಿದ ಎಸ್ಜಿಎಸ್ಟಿ ಅಧಿಕಾರಿ, ‘‘ರಾಕೇಶ್ ಚೋಕ್ಸಿ ನಾಡೋಲ್ ಟ್ರೇಡರ್ಸ್, ಮಂಗಳಂ ಇಂಪ್ಯಾಕ್ಟ್ ಮತ್ತು ಶ್ರೀ ಎಂಟರ್ಪ್ರೈಸಸ್ ಎಂಬ ಮೂರು ನಕಲಿ ಕಂಪನಿಗಳನ್ನು ಸ್ಥಾಪಿಸಿದ್ದರು.
ಈ ಕಂಪನಿಗಳನ್ನು ಆರೋಪಿ ಚೋಕ್ಸಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಆರ್ಥಿಕವಾಗಿ ದುರ್ಬಲ ವ್ಯಕ್ತಿಗಳ ಇತರ ದಾಖಲೆಗಳನ್ನು ಬಳಸಿಕೊಂಡು, ಕಂಪನಿ ಸ್ಥಾಪಿಸಿದ್ದರು. ಅಷ್ಟೇ ಅಲ್ಲ ಈ ಕಂಪನಿಗಳು ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದವು. ಆರೋಪಿ ಈ ನಕಲಿ ಕಂಪನಿಗಳನ್ನು ಬಳಸಿಕೊಂಡು 41 ಕೋಟಿ ರೂಪಾಯಿ ಮೌಲ್ಯದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ಗಳನ್ನು ಮೋಸದಿಂದ ಪಡೆದುಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿ ನಿವಾಸ ಮತ್ತು ನಕಲಿ ಕಂಪನಿಗಳ ಮೇಲೆ ಎಸ್ಜಿಎಸ್ಟಿ ಇಲಾಖೆಯ ನಡೆಸಿದ ದಾಳಿಯ ವೇಳೆ ಹೌಸಿಂಗ್ ಸೊಸೈಟಿಯ ಸೆಕ್ಯುರಿಟಿ ಗಾರ್ಡ್ ಕ್ಯಾಬಿನ್ನಲ್ಲಿ ಬಚ್ಚಿಟ್ಟಿದ್ದ ದಾಖಲೆಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕ್ಯಾಬಿನ್ನಲ್ಲಿದ್ದ ಎಲ್ಲಾ ಡಿಜಿಟಲ್ ದಾಖಲೆಗಳು ಮತ್ತು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿದ್ದಾರೆ. ಚೋಕ್ಸಿಯನ್ನು ಮೆಟ್ರೋಪಾಲಿಟನ್ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಮಾರ್ಚ್ 17ರವರೆಗೆ ನ್ಯಾಯಂಗ ಬಂಧನದಲ್ಲಿರಿಸಲಾಗಿದೆ. ಆರೋಪಿ ಬಂಧನ ಅವಧಿ ಮುಗಿದ ನಂತರ ಅವರನ್ನು ಮತ್ತೆ ನ್ಯಾಯಲಯಕ್ಕೆ ಹಾಜರುಪಡಿಸಲಾಗುತ್ತದೆ. ಈ ಸಂಬಂಧ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಸರಕು ಮತ್ತು ಸೇವೆಗಳ ವಿನಿಮಯವಿಲ್ಲದೇ ಕೇವಲ ಕಾಗದದ ಮೇಲೆ ವಹಿವಾಟು ನಡೆಸುವ ಮೂಲಕ ನಕಲಿ ಬಿಲ್ಲಿಂಗ್ ಹಗರಣವನ್ನು ನಡೆಸಲಾಗಿದ್ದು. ಆರೋಪಿ ನಕಲಿ ಕಂಪನಿಗಳಿಗೆ ಜಿಎಸ್ಟಿ ಸಂಖ್ಯೆಗಳನ್ನು ಪಡೆದುಕೊಂಡು ಹಣವನ್ನು ಲಪಟಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಎನ್‌ಸಿಪಿ ನಾಯಕ ಮೇಲೆ ಇಡಿ ದಾಳಿ: ಮಹಾರಾಷ್ಟ್ರದ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರೀಫ್ ಅವರ ಕಾಗಲ್‌ನಲ್ಲಿರುವ ನಿವಾಸದ ಮೇಲೆ ಇಡಿ ಇಂದು ಮತ್ತೊಮ್ಮೆ ದಾಳಿ ನಡೆಸಿದೆ. ಕಳೆದ ಒಂದೂವರೆ ತಿಂಗಳಲ್ಲಿ ಇದು ಎರಡನೇ ದಾಳಿಯಾಗಿದೆ. ನಾಲ್ಕೈದು ಇಡಿ ಅಧಿಕಾರಿಗಳು ಕಾಗಲ್‌ನಲ್ಲಿರುವ ಹಸನ್ ಮುಶ್ರಿಫ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಇಂದು ಮುಂಜಾನೆ ತನಿಖೆ ಆರಂಭಿಸಿದ್ದಾರೆ.
ಹಸನ್ ಮುಶ್ರಿಫ್ ಅಧ್ಯಕ್ಷತೆಯ ಕೊಲ್ಹಾಪುರ ಜಿಲ್ಲಾ ಕೇಂದ್ರ ಬ್ಯಾಂಕ್‌ನ ಮೇಲೂ ಈ ಹಿಂದೆ ಇಡಿ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಕಾಗಲ್‌ನ ಮನೆ ಮೇಲೆ ಮತ್ತೊಮ್ಮೆ ಇಡಿ ದಾಳಿ ನಡೆಸಿದ್ದು, ಸಂಚಲನ ಮೂಡಿಸಿದೆ. ಇಡಿ ಅಧಿಕಾರಿಗಳು ಬೆಳಗ್ಗೆ ಮುಶ್ರಿಫ್ ಮನೆಗೆ ಬಂದು ತನಿಖೆ ಆರಂಭಿಸಿದ್ದು, ಈ ಕಾರ್ಯಾಚರಣೆಯಲ್ಲಿ ಯಾವುದೇ ಹಸ್ತಕ್ಷೇಪ ನಡೆಯದಂತೆ ಮುಶ್ರಿಫ್ ಮನೆಯ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: ಅಯೋಧ್ಯಾದಲ್ಲಿ ಮಾ. 22ರಿಂದ ರಾಮಜನ್ಮೋತ್ಸವ: ಈ ಬಾರಿ ಐತಿಹಾಸಿಕವಾಗಿಸಲು ನಿರ್ಧಾರ