ಗಡ್ಚಿರೋಲಿ (ಮಹಾರಾಷ್ಟ್ರ): ಇಲ್ಲಿನ ಎಟಪಲ್ಲಿ ತಾಲೂಕಿನ ಕೋಟ್ಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದು 14ರಿಂದ 15 ನಕ್ಸಲರು ಬಲಿಯಾಗಿದ್ದಾರೆ.
ಬೆಳಗ್ಗೆಯೆ ನಕ್ಸಲರ ವಿರುದ್ಧ ಕಾರ್ಯಚರಣೆಗಿಳಿದ ಪೊಲೀಸರು ನಕ್ಸಲರ ಹೊಡೆದುರುಳಿಸಲು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸುಮಾರು 14ರಿಂದ 15 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಲ್ಲಿ 8 ನಕ್ಸಲರ ಶವ ಪೊಲೀಸರ ವಶದಲ್ಲಿದ್ದು, ಸ್ಥಳದಲ್ಲಿ ಶೋಧಕಾರ್ಯ ಮುಂದುವರಿದಿದೆ.
ಕೆಲ ದಿನಗಳ ಹಿಂದೆ ಇಲ್ಲಿನ ಎಟಪಲ್ಲಿ ತಾಲೂಕಿನ ಗುಟ್ಟಾ ಪೊಲೀಸ್ ಸಹಾಯ ಕೇಂದ್ರವನ್ನು ಗುರಿಯಾಗಿಸಿಟ್ಟುಕೊಂಡು ನಕ್ಸಲರು ಗ್ರೆನೇಡ್ ಎಸೆದು ಠಾಣೆಯನ್ನು ಸ್ಫೋಟಿಸುವ ಯತ್ನಕ್ಕೆ ಮುಂದಾಗಿದ್ದರು. ಆದರೆ, ಗ್ರೆನೇಡ್ ಸ್ಫೋಟಿಸದೇ ಬಹುದೊಡ್ಡ ಅನಾಹುತ ತಪ್ಪಿತ್ತು.
ಅಂದಿನಿಂದ ನಕ್ಸಲರ ಚಲನವಲನದ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದರು. ಇದೇ ವೇಳೆ, ಇಲ್ಲಿನ ಪಾಡಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಅಡಗಿ ಕುಳಿತಿದ್ದ ನಕ್ಸಲರು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಒಂದು ಗಂಟೆಗೂ ಹೆಚ್ಚು ಹೊತ್ತು ಗುಂಡಿನ ಚಕಮಕಿ ನಡೆದಿದ್ದು, 14ರಿಂದ 15 ನಕ್ಸಲರು ಹತರಾದರೆ, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.