ನವದೆಹಲಿ: 2021ರಲ್ಲಿ ಭಾರತದಲ್ಲಿ 126 ಹುಲಿಗಳು ಸಾವನ್ನಪ್ಪಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಮಾಹಿತಿಯನ್ನು ಬಹಿರಂಗಪಡಿಸಿದೆ.
ಬುಧವಾರ ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ಹುಲಿಯೊಂದು ಸಾವನ್ನಪ್ಪಿದ್ದು, ಮಧ್ಯಪ್ರದೇಶ ರಾಜ್ಯದಲ್ಲಿ ಈ ವರ್ಷ ಒಟ್ಟು 44 ಹುಲಿಗಳು ಸಾವನ್ನಪ್ಪಿವೆ. ವರದಿಗಳ ಪ್ರಕಾರ ಎರಡು ದಿನಗಳ ಹಿಂದೆ ರಾಜ್ಯದ ಮಧ್ಯಪ್ರದೇಶದ ದಿಂಡೋರಿ ಪ್ರದೇಶದಲ್ಲಿ ಹುಲಿಯೊಂದು ವಿಷ ಪದಾರ್ಥ ತಿಂದು ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಹುಲಿಗಳ ಸಾವಿಗೆ ಕಾರಣವೇನೆಂದು ತಿಳಿಯಲು ಪರಿಶೀಲನೆ ನಡೆಸಲಾಗುತ್ತಿದೆ.
2021ರಲ್ಲಿ ಹುಲಿಗಳ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ತನಿಖೆಗಳು ನಡೆಯುತ್ತಿವೆ ಎಂದು ಎನ್‌ಟಿಸಿಎ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಟಿಸಿಎ 2012ರಿಂದ ಹುಲಿಗಳ ಸಾವು ಕುರಿತು ದತ್ತಾಂಶ ಸಂಗ್ರಹ ಕಾರ್ಯ ಆರಂಭಿಸಿತು. 2016ರಲ್ಲಿ 121 ಹುಲಿಗಳು ಮೃತಪಟ್ಟಿದ್ದವು. ಈ ಅಂಕಿ ಅಂಶಕ್ಕೆ ಹೋಲಿಸಿದರೆ ಈ ವರ್ಷವೇ ಹೆಚ್ಚು ಹುಲಿಗಳು ಸಾವನ್ನಪ್ಪಿರೋದು ಎಂಬ ಮಾಹಿತಿ ಸಿಕ್ಕಿದೆ.
ಹುಲಿಗಳ ರಕ್ಷಣೆಗೆ ಕ್ರಮ..
ಹುಲಿಗಳನ್ನು ಸಂರಕ್ಷಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಗಸ್ತು ತಿರುಗುವುದು ಮತ್ತು ಬೇಟೆಯಾಡುವ ಜನರನ್ನು ಬಂಧಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೋರ್ವರು ತಿಳಿಸಿದರು.
ಅಲ್ಲದೇ, ಹುಲಿಗಳ ಸಾವಿಗೆ ನಾನಾ ಕಾರಣಗಳಿರಬಹುದು. ಹುಲಿಗಳ ಸಂಖ್ಯೆ ದೊಡ್ಡದಿರುವುದರಿಂದ ನಿಖರ ಕಾರಣಗಳನ್ನು ಕಂಡುಹಿಡಿಯಲು ಪ್ರಮಾಣಿತ ಕಾರ್ಯಾಚರಣೆಯ ವಿಧಾನವನ್ನು (SOP) ಅನುಸರಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಮಧ್ಯಪ್ರದೇಶದ ದಿಂಡೋರಿಯಲ್ಲಿ ಹುಲಿ ವಿಷ ಸೇವಿಸಿ ಸಾವನ್ನಪ್ಪಿದೆ ಎಂಬ ವರದಿಗಳನ್ನು ತಿರಸ್ಕರಿಸಿದ ಅಧಿಕಾರಿ, ಪರಿಶೀಲನೆಗೆ ಸಮಯ ಹಿಡಿಯುವುದರಿಂದ ಅವು ಕೇವಲ ಊಹೆಗಳಾಗಿವೆ ಎಂದು ಹೇಳಿದರು.
ಇದನ್ನೂ ಓದಿ: ಅಧ್ಯಾತ್ಮಿಕ ಪ್ರಭಾವಕ್ಕೊಳಗಾಗಿ 2 ತಿಂಗಳ ಹಿಂದೆ ಬಾಲಕಿ ಕಾಣೆ.. ಹುಡುಕಿಕೊಡುವಂತೆ ಪೋಷಕರ ಮನವಿ!
ಎನ್‌ಟಿಸಿಎ ಪ್ರಕಾರ, ಈ ವರ್ಷ ಮಧ್ಯಪ್ರದೇಶದಲ್ಲಿ 44, ಮಹಾರಾಷ್ಟ್ರದಲ್ಲಿ 26 ಮತ್ತು ಕರ್ನಾಟಕದಲ್ಲಿ 14 ಹುಲಿಗಳು ಸಾವ(ಗರಿಷ್ಟ ಸಾವು)ನ್ನಪ್ಪಿವೆ.