ಭುವನೇಶ್ವರ (ಒಡಿಶಾ): ಒಡಿಶಾ ರಾಜ್ಯಾದ್ಯಂತ ಮಿಂಚು ಸಹಿತ ಭಾರಿ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಒಂದೇ ದಿನದಲ್ಲಿ ಸಿಡಿಲು ಬಡಿದು 12 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಭಾನುವಾರ ತಿಳಿಸಿದೆ. ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಿಸಿದೆ.
ರಾಜ್ಯದ ಅವಳಿ ನಗರಗಳಾದ ಭುವನೇಶ್ವರ ಮತ್ತು ಕಟಕ್ ಸೇರಿ 11 ಜಿಲ್ಲೆಗಳಲ್ಲಿ ಶನಿವಾರ ಮಿಂಚಿನೊಂದಿಗೆ ಭಾರಿ ಮಳೆಯಾಗಿದೆ. ಮಧ್ಯಾಹ್ನದ ವೇಳೆ 90 ನಿಮಿಷಗಳ ಕಾಲಾವಧಿಯಲ್ಲಿ ಭುವನೇಶ್ವರ ಮತ್ತು ಕಟಕ್‌ನಲ್ಲಿ ಕ್ರಮವಾಗಿ 126 ಮಿ.ಮೀ ಮತ್ತು 95.8 ಮಿ.ಮೀ ಮಳೆ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ, ಸಿಡಿಲು ಬಡಿದು ಒಟ್ಟು 12 ಜನರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಖುರ್ದಾ ಜಿಲ್ಲೆಯಲ್ಲಿ ನಾಲ್ವರು, ಬೋಲಂಗಿರ್‌ನಲ್ಲಿ ಇಬ್ಬರು ಮತ್ತು ಅಂಗುಲ್, ಬೌಧ್, ಗಜಪತಿ, ಜಗತ್‌ಸಿಂಗ್‌ಪುರ, ಧೆಂಕನಾಲ್ ಹಾಗೂ ಪುರಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತರ (ಎಸ್‌ಆರ್‌ಸಿ) ಕಚೇರಿ ತಿಳಿಸಿದೆ.
ಅಲ್ಲದೇ, ಬೋಲಂಗಿರ್ ಜಿಲ್ಲೆಯಲ್ಲಿ ಎಂಟು ಮಂದಿ, ಖುರ್ದಾದಲ್ಲಿ ಮೂವರು ಮತ್ತು ಅಂಗುಲ್, ಕಟಕ್ ಮತ್ತು ಗಂಜಾಂನಲ್ಲಿ ತಲಾ ಒಬ್ಬರು ಗಾಯಗೊಂಡಿದ್ದಾರೆ. ಇದಲ್ಲದೆ, ಸಿಡಿಲು ಬಡಿದು ಗಜಪತಿಯಲ್ಲಿ ಆರು ಮತ್ತು ಕಂಧಮಾಲ್‌ನಲ್ಲಿ ಎರಡು ಸೇರಿ ಎಂಟು ಜಾನುವಾರುಗಳು ಸಾವನ್ನಪ್ಪಿವೆ ಎಂದು ಎಸ್‌ಆರ್‌ಸಿ ಕಚೇರಿ ಮಾಹಿತಿ ನೀಡಿದೆ.
ಮತ್ತೊಂದೆಡೆ, ರಾಜ್ಯದಲ್ಲಿ ಮಧ್ಯಾಹ್ನ 36,597 ಸಿಸಿ (ಮೋಡದಿಂದ ಮೋಡ) ಮಿಂಚು ಮತ್ತು 25,753 ಸಿಜಿ (ಮೋಡದಿಂದ ನೆಲಕ್ಕೆ) ಮಿಂಚು ದಾಖಲಾಗಿದೆ ಎಂದು ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಒಎಸ್ಡಿಎಂಎ) ಟ್ವೀಟ್ ಮಾಡಿದೆ. ಇದೇ ವೇಳೆ, ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಸಿಡಿಲು ಸಮೇತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರವೇ ಮುನ್ಸೂಚನೆ ನೀಡಿದೆ.
ಚಂಡಮಾರುತದ ಪರಿಚಲನೆಯು ಮಾನ್ಸೂನ್ಅನ್ನು ಸಕ್ರಿಯಗೊಳಿಸಿದೆ, ಇದರಿಂದ ರಾಜ್ಯಾದ್ಯಂತ ಭಾರಿ ಮಳೆ ಆಗುತ್ತಿದೆ. ಗುಡುಗು ಸಹಿತ ಮಳೆಯಾಗುವ ಸಮಯದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ಇಲಾಖೆ ಜನರಿಗೆ ಸಲಹೆ ನೀಡಿದೆ. ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಸಹ ಚಂಡಮಾರುತದ ಪರಿಚಲನೆ ಇದೆ. ಇನ್ನೊಂದು ಚಂಡಮಾರುತ ಬಂಗಾಳ ಕೊಲ್ಲಿಯ ಉತ್ತರದಲ್ಲಿ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಹೆಚ್ ಆರ್ ಬಿಸ್ವಾಸ್ ಹೇಳಿದ್ದಾರೆ.
ಒಡಿಶಾ ಸರ್ಕಾರವು ಮಿಂಚನ್ನು ರಾಜ್ಯ ನಿರ್ದಿಷ್ಟ ವಿಪತ್ತು ಎಂದು ಘೋಷಿಸಿದೆ. 2021-22ನೇ ಸಾಲಿನಲ್ಲಿ 30 ಜಿಲ್ಲೆಗಳಲ್ಲಿ ಸಿಡಿಲು ಬಡಿದು 281 ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. (ಪಿಟಿಐ)
ಇದನ್ನೂ ಓದಿ: ಆಟೋ - ಲಾರಿ ಡಿಕ್ಕಿ: ಐವರು ಅಡುಗೆ ಸಿಬ್ಬಂದಿ ದುರ್ಮರಣ