ಗ್ವಾಲಿಯರ್, ಮಧ್ಯಪ್ರದೇಶ: ಇಂದು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಭಾರತಕ್ಕೆ ಬಂದಿಳಿದಿವೆ. ಈ ಬಗ್ಗೆ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಗುರುವಾರ ಮಾಹಿತಿ ನೀಡಿದ್ದರು. 7 ಗಂಡು ಮತ್ತು 5 ಹೆಣ್ಣು ಚಿರತೆಗಳು ಸೇರಿ ಇಂದು ಫಿಂಡಾ ಮತ್ತು ರೂಬರ್ಗ್ ರಿಸರ್ವ್‌ನಿಂದ ಭಾರತಕ್ಕೆ ಬಂದಿವೆ.
ಚೀತಾಗಳು ಭಾರತೀಯ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ಕಾರ್ಗೋ ವಿಮಾನದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿವೆ. ಅಲ್ಲಿಂದ ಅವುಗಳನ್ನು ರಾಜ್ಯದ ಹೊಸ ಮನೆಯಾದ 'ದಿ ಕುನೊ ನ್ಯಾಷನಲ್ ಪಾರ್ಕ್'ಗೆ ಕರೆದೊಯ್ಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೀತಾಗಳ ಆಗಮನದಿಂದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಇಂದು ಚಿರತೆಗಳ ಸಂಖ್ಯೆ ಹೆಚ್ಚಾಗಲಿದೆ. ನಾನು ಪ್ರಧಾನಿ ಮೋದಿಯವರಿಗೆ ನನ್ನ ಹೃದಯದಾಳದಿಂದ ಧನ್ಯವಾದ ಹೇಳುತ್ತೇನೆ. ಇದು ಅವರ ದೂರದೃಷ್ಟಿಯಾಗಿದೆ. 12 ಚಿರತೆಗಳನ್ನು ಕುನೊಗೆ ಪುನರ್ವಸತಿ ಮಾಡಲಾಗುವುದು ಮತ್ತು ಒಟ್ಟು ಸಂಖ್ಯೆ 20 ಆಗಲಿದೆ ಎಂದು ಸಿಎಂ ಚೌಹಾಣ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ 'ಚೀತಾ ಮರು ಪರಿಚಯ' ಅಡಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ಸೆಪ್ಟೆಂಬರ್ 17 ರಂದು, ತಮ್ಮ 72 ನೇ ಹುಟ್ಟುಹಬ್ಬದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದ ಕ್ವಾರಂಟೈನ್ ಆವರಣದಲ್ಲಿ ನಮೀಬಿಯಾದಿಂದ ತರಿಸಲಾದ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಬಿಡುಗಡೆ ಮಾಡಿದ್ದರು.
ಪ್ರಸ್ತುತ ಕುನೊದಲ್ಲಿನ ಎಂಟು ಚೀತಾಗಳು ಪ್ರತಿ ಮೂರು ನಾಲ್ಕು ದಿನಗಳಿಗೊಮ್ಮೆ ಬೇಟೆಯಾಡಿ ಪ್ರಾಣಿಯೊಂದನ್ನು ಕೊಲ್ಲುತ್ತಿವೆ ಮತ್ತು ಉತ್ತಮ ಆರೋಗ್ಯ ಹೊಂದಿವೆ. ಕ್ರಿಯೇಟಿನೈನ್ ಮಟ್ಟ ಹೆಚ್ಚಾದ ಕಾರಣ ಚಿರತೆಯೊಂದು ಅಸ್ವಸ್ಥವಾಗಿತ್ತು. ಆದರೆ, ಚಿಕಿತ್ಸೆಯ ನಂತರ ಈ ಹೆಣ್ಣು ಚೀತಾ ಚೇತರಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಆಫ್ರಿಕಾದಿಂದ ಭಾರತಕ್ಕೆ ಚೀತಾ ಸಾಗಿಸಲು ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದವು.
ಸದ್ಯ ಪ್ರಪಂಚದಲ್ಲಿ ಜೀವಂತವಾಗಿರುವ 7,000 ಚೀತಾಗಳ ಪೈಕಿ ಹೆಚ್ಚಿನವು ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಬೋಟ್ಸ್ವಾನಾದಲ್ಲಿ ವಾಸಿಸುತ್ತವೆ. ನಮೀಬಿಯಾವು ವಿಶ್ವದಲ್ಲಿಯೇ ಅತಿ ಹೆಚ್ಚು ಚೀತಾಗಳನ್ನು ಹೊಂದಿದೆ. ಚೀತಾ ಭಾರತದಲ್ಲಿ ಸಂಪೂರ್ಣವಾಗಿ ನಾಶವಾದ ಏಕೈಕ ದೊಡ್ಡ ಮಾಂಸಾಹಾರಿ ಪ್ರಬೇಧವಾಗಿದೆ. ಮುಖ್ಯವಾಗಿ ಅತಿಯಾದ ಬೇಟೆ ಮತ್ತು ಆವಾಸಸ್ಥಾನದ ನಷ್ಟದಿಂದಾಗಿ ಚೀತಾಗಳ ಸಂತತಿ ನಾಶವಾಯಿತು. ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಸಾಲ್ ಅರಣ್ಯದಲ್ಲಿ 1948 ರಲ್ಲಿ ಕೊನೆಯ ಚೀತಾ ಸಾವನ್ನಪ್ಪಿತ್ತು.
ಫೆಬ್ರವರಿಯಲ್ಲಿ 12 ಚೀತಾಗಳನ್ನು ತರಿಸಿಕೊಂಡ ನಂತರ ಮುಂದಿನ ಎಂಟರಿಂದ 10 ವರ್ಷಗಳವರೆಗೆ ಪ್ರತಿವರ್ಷ 12 ಚೀತಾಗಳನ್ನು ತರಿಸಿಕೊಳ್ಳುವ ಯೋಜನೆ ಇದೆ. ಒಡಂಬಡಿಕೆಯ ನಿಯಮಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಆಯಾ ಕಾಲಮಾನದಲ್ಲಿ ಒಡಂಬಡಿಕೆಯು ಪ್ರಸ್ತುತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಹೀಗೆ ಮಾಡಲಾಗುತ್ತದೆ ಎಂದು ಪರಿಸರ ಸಚಿವಾಲಯ ಹೇಳಿದೆ.
ಭಾರತದ ವನ್ಯಜೀವಿ ಸಂಸ್ಥೆಯು ಸಿದ್ಧಪಡಿಸಿದ 'ಭಾರತದಲ್ಲಿ ಚೀತಾ ಮರುಪರಿಚಯಕ್ಕಾಗಿ ಕ್ರಿಯಾ ಯೋಜನೆ' ಪ್ರಕಾರ, ಹೊಸ ಚೀತಾಗಳನ್ನು ಸ್ಥಾಪಿಸಲು ಸೂಕ್ತವಾದ ಸುಮಾರು 12-14 ಕಾಡು ಚೀತಾಗಳನ್ನು ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಇತರ ಆಫ್ರಿಕನ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಭಾರತವು ಒಂದು ಕಾಲದಲ್ಲಿ ಏಷಿಯಾಟಿಕ್ ಚಿರತೆಗಳ ಪ್ರಮುಖ ನೆಲೆಯಾಗಿತ್ತು. ಆದರೆ, 1952 ರ ವೇಳೆಗೆ ಈ ಪ್ರಾಣಿಯು ಭಾರತದಲ್ಲಿ ವಿನಾಶವಾಗಿದೆ ಎಂದು ಘೋಷಿಸಲಾಗಿತ್ತು
2020 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಆಫ್ರಿಕನ್ ಚೀತಾಗಳು ಹಾಗೂ ವಿಭಿನ್ನ ಉಪಜಾತಿಗಳನ್ನು ಪ್ರಾಯೋಗಿಕ ಆಧಾರದ ಮೇಲೆ ಎಚ್ಚರಿಕೆಯಿಂದ ಆಯ್ಕೆ ಮಾಡಿದ ಸ್ಥಳದಲ್ಲಿ ದೇಶಕ್ಕೆ ತರಬಹುದು ಎಂದು ತೀರ್ಪು ನೀಡಿದ ನಂತರ ಚೀತಾಗಳನ್ನು ಮರಳಿ ಭಾರತಕ್ಕೆ ತರುವ ಪ್ರಯತ್ನಗಳು ವೇಗಗೊಂಡವು. ದಕ್ಷಿಣ ಆಫ್ರಿಕಾದ ಚಿರತೆಗಳು ಎಲ್ಲ ಇತರ ಚಿರತೆ ವಂಶಾವಳಿಗಳಿಗೆ ಪೂರ್ವಜರೆಂದು ಕಂಡು ಬಂದಿದೆ. ಆದ್ದರಿಂದ ಈ ಚೀತಾಗಳು ಭಾರತದ ಮರುಪರಿಚಯ ಕಾರ್ಯಕ್ರಮಕ್ಕೆ ಸೂಕ್ತವಾಗಿವೆ ಎಂದು ಕಳೆದ ವರ್ಷ ಭಾರತೀಯ ಪರಿಸರ ಸಚಿವಾಲಯ ಹೇಳಿತ್ತು.