ಹೈದರಾಬಾದ್: ಒಳಚರಂಡಿಗೆ ಬಿದ್ದ ತಮ್ಮನನ್ನು ರಕ್ಷಿಸಲು ಹೋಗಿ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಸಿಕಂದರಾಬಾದ್ನ ಕಲಾಸಿಗುಡದಲ್ಲಿ ಶನಿವಾರ ನಡೆದಿದೆ. ಶ್ರೀನಿವಾಸ್ ಮತ್ತು ರೇಣುಕಾ ದಂಪತಿಯ ಪುತ್ರಿ ಮೌನಿಕ (11) ಮೃತ ಬಾಲಕಿ.
ಪೊಲೀಸರ ಮಾಹಿತಿಯ ಪ್ರಕಾರ, ಮೌನಿಕ ತನ್ನ ಕಿರಿಯ ಸಹೋದರನ ಜೊತೆ ಎಂದಿನಂತೆ ಬೆಳಗ್ಗೆ ಹಾಲನ್ನು ಖರೀದಿಸಲು ಅಂಗಡಿಗೆ ತೆರಳಿದ್ದಳು. ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಇಬ್ಬರು ವಾಪಸ್ ನಡೆದುಕೊಂಡು ಬರುತ್ತಿರುವಾಗ ರಸ್ತೆ ಮಧ್ಯದಲ್ಲಿದ್ದ ಒಳಚರಂಡಿಯ ರಂಧ್ರವನ್ನು ಗಮನಿಸದೆ ಬಾಲಕಿಯ ತಮ್ಮ ಬಿದ್ದಿದ್ದಾನೆ. ಗುಂಡಿಯೊಳಗೆ ಬಿದ್ದ ತಮ್ಮನನ್ನು ಬಾಲಕಿಯು ಕೂಡಲೇ ಮೇಲೆತ್ತಿದ್ದಾಳೆ. ಆದರೆ ಈ ವೇಳೆ ಬಾಲಕಿಯು ಆಯತಪ್ಪಿ ಒಳಚರಂಡಿಗೆ ಬಿದ್ದಿದ್ದಾಳೆ.
ಇದಾದ ನಂತರ ಬಾಲಕಿಯ ಕಿರಿಯ ಸಹೋದರ ಮನೆಗೆ ಧಾವಿಸಿ ಪೋಷಕರಿಗೆ ಘಟನೆಯ ಬಗ್ಗೆ ತಿಳಿಸಿದ್ದಾನೆ. ತಕ್ಷಣವೇ ಘಟನಾ ಸ್ಥಳಕ್ಕೆ ಬಂದು ಹುಡುಕಿದರು ಬಾಲಕಿಯ ಸುಳಿವು ಸಿಗಲಿಲ್ಲ. ಕೊನೆಗೆ ಜಿಎಚ್‌ಎಂಸಿ (ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ) ಕಾರ್ಪೊರೇಟರ್ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿದ ನಂತರ ಡಿಆರ್ಎಫ್ ತಂಡಗಳು ಸ್ಥಳಕ್ಕೆ ಆಗಮಿಸಿ ಶೋಧಕಾರ್ಯ ನಡೆಸಿ ಬಾಲಕಿಯ ಶವವನ್ನು ಪತ್ತೆ ಹಚ್ಚಿದ್ದಾರೆ.
ಜಿಎಚ್‌ಎಂಸಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಮೃತ ಬಾಲಕಿಯ ಪೋಷಕರು ಆರೋಪಿಸಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಮಹಾನಗರ ಪಾಲಿಕೆ ಮೇಯರ್ ಗದ್ವಾಲ್ ವಿಜಯಲಕ್ಷ್ಮಿ ಭೇಟಿ ನೀಡಿ ಹಲವು ಬಾರಿ ಎಚ್ಚರಿಕೆ ನೀಡಿದರು ನಿರ್ಲಕ್ಷ್ಯ ತೋರಿದ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತರ ಕುಟುಂಬಕ್ಕೆ ಮೇಯರ್ ಸಾಂತ್ವಾನ ಹೇಳಿ 2 ಲಕ್ಷ ರೂ ಪರಿಹಾರವನ್ನು ಘೋಷಿಸಿದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈದರಾಬಾದ್ ಮಹಾನಗರ ಪಾಲಿಕೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಜಿಎಚ್‌ಎಂಸಿ ಎಇ ತಿರುಮಲಯ್ಯ ಮತ್ತು ವರ್ಕ್ ಇನ್‌ಸ್ಪೆಕ್ಟರ್ ಹರಿಕೃಷ್ಣ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಘಟನೆಯ ಕುರಿತು 10 ದಿನದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಜಿಎಚ್‌ಎಂಸಿ ಆಯುಕ್ತರು ಇಇ ಇಂದಿರಾ ಅವರಿಗೆ ಸೂಚಿಸಿದೆ.
ಕಲ್ಯಾಣಿಗೆ ಬಿದ್ದು ಬಾಲಕಿ ಸಾವು: ಪ್ರತ್ಯೇಕ ಘಟನೆಯಲ್ಲಿ ಹೂಳು ತುಂಬಿದ್ದ ಕಲ್ಯಾಣಿಗೆ ಬಿದ್ದು ಬಾಲಕಿ ಸಾವನ್ನಪ್ಪಿದ್ದು, 6 ವರ್ಷದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ಘಟನೆ ನಡೆದಿದೆ. ಬಾಲಕಿ ಹರ್ಷಿತ (15) ಸಾವನ್ನಪ್ಪಿದ್ದು, ಅಭಿಲಾಷ್ (6) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಲ್ಯಾಣಿಯ ನಿರ್ವಹಣೆ ಮಾಡದೆ ಪಾಳು ಬಿಡಲಾಗಿದೆ ಮತ್ತು ಕಲ್ಯಾಣಿ ಸುತ್ತ ತಂತಿಬೇಲಿ ನಿರ್ಮಾಣ ಮಾಡದಿರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಾಲೇಜು ಫೆಸ್ಟ್ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಓರ್ವ ವಿದ್ಯಾರ್ಥಿಯ ಹತ್ಯೆ