ಮುಂಬೈ, ಮಹಾರಾಷ್ಟ್ರ: ಕೋವಿಡ್ ಸೋಂಕು ಪ್ರಕರಣಗಳ ಕಾರಣದಿಂದ ಈಗಾಗಲೇ ಕಂಗಾಲಾಗಿರುವ ಮಹಾರಾಷ್ಟ್ರದಲ್ಲಿ ಬ್ಲಾಕ್ ಫಂಗಸ್ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಅಲ್ಲಿನ ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ.
ಇತ್ತೀಚಿಗೆ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ವೈರಸ್‌ನಿಂದ ಗುಣಮುಖರಾದ ರೋಗಿಗಳು ಈಗ ಬ್ಲಾಕ್ ಫಂಗಸ್ಗೆ ಒಳಗಾಗಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ದೇಶದ ವಾಣಿಜ್ಯ ರಾಜಧಾನಿಯಲ್ಲಿ ಇದುವರೆಗೆ 111 ಬ್ಲಾಕ್ ಫಂಗಸ್ (ಮ್ಯೂಕರ್ಮೈಕೋಸಿಸ್) ಪ್ರಕರಣಗಳು ಪತ್ತೆಯಾಗಿವೆ. ಬ್ಲಾಕ್ ಫಂಗಸ್ಗೆ ಒಳಗಾದ ರೋಗಿಗಳಿಗೆ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆ, ನಾಯರ್ ಆಸ್ಪತ್ರೆ ಮತ್ತು ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಹ್ಮದ್‌ನಗರದಲ್ಲಿರುವ ಜಮಖೇಡ್ ಮತ್ತು ಶ್ರೀಗೊಂಡ ತಾಲೂಕಿನಲ್ಲಿ ತಲಾ ಒಂದೊಂದು ಕಪ್ಪು ಶಿಲೀಂಧ್ರ ಸೋಂಕಿತರು ಪತ್ತೆಯಾಗಿದ್ದು, ಜಮ್‌ಖೇಡ್‌ನ ರೋಗಿಗೆ ಅಹ್ಮದ್‌ನಗರದಲ್ಲಿ ಮತ್ತು ಶ್ರೀಗೊಂಡ ಮೂಲದ ರೋಗಿಗೆ ಪುಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಮಗು ಸಾವು, ದೇವರ ಬಳಿ ಗೋಳಾಡಿದ ಅಜ್ಜಿ
ಜಲಗಾಂವ್ನಲ್ಲಿ ಈವರೆಗೆ 13 ಮಂದಿಯಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದು, ಈ ಪೈಕಿ ಆರು ಮಂದಿ ಸಾವನ್ನಪ್ಪಿದ್ದಾರೆ. ನಾಗ್ಪುರದ ಸರ್ಕಾರಿ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 40 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್ ಮೂಗು, ಕಣ್ಣುಗಳು, ದವಡೆಯ ಮೇಲೆ ಸೋಂಕು ತಗುಲಿ ಅಂತಿಮವಾಗಿ ಮೆದುಳಿನೊಳಗೆ ಸೇರುವ ಸಾಧ್ಯತೆಯಿರುತ್ತದೆ. ಈ ಸೋಂಕಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ರೋಗಿಯು ಸಾವನ್ನಪ್ಪುವ ಸಾಧ್ಯತೆ ದಟ್ಟವಾಗಿರುತ್ತದೆ.