ಚೆನ್ನೈ(ತಮಿಳುನಾಡು): ಸುಮಾರು ಒಂದು ದಶಕದ ನಂತರ ಬಹು ಚರ್ಚಿತ ರಸ್ತೆ ಯೋಜನೆಗಳಲ್ಲಿ ಒಂದಾದ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ಶೀಘ್ರದಲ್ಲೇ ಪ್ರಾರಂಭವಾಗಲಿದೆ. 262 ಕಿಮೀ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು ರೂ.14,870 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದುಹೋಗುವ ಈ ರಸ್ತೆಯಲ್ಲಿ ವಾಹನ ಚಾಲಕರು ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸಬಹುದು ಮತ್ತು ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು 2-3 ಗಂಟೆಗಳವರೆಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2011 ರಲ್ಲಿ ಈ ಯೋಜನೆ ಪ್ರಸ್ತಾಪ ಮಾಡಲಾಗಿತ್ತು. ಎನ್ಹೆಚ್ಎಐ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಜನರು, ವಾಣಿಜ್ಯ ಸಂಸ್ಥೆಗಳು ಮತ್ತು ಪರಿಸರವಾದಿಗಳಿಂದ ತೀವ್ರ ವಿರೋಧ ಉಂಟಾಗಿತ್ತು. ಕರ್ನಾಟಕ (800 ಹೆಕ್ಟೇರ್), ಆಂಧ್ರಪ್ರದೇಶ (900 ಹೆಕ್ಟೇರ್) ಮತ್ತು ತಮಿಳುನಾಡು (900 ಹೆಕ್ಟೇರ್) ಮೂರು ರಾಜ್ಯಗಳಲ್ಲಿ ಸುಮಾರು 2,600 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಎಂದು ಎನ್ಹೆಚ್ಎಐ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಚೆನ್ನೈನಿಂದ ಬೆಂಗಳೂರಿಗೆ ಎರಡು ಮಾರ್ಗಗಳಿವೆ. ಕೃಷ್ಣಗಿರಿ ಮತ್ತು ರಾಣಿಪೇಟೆ ಮೂಲಕ 372 ಕಿಮೀ ಮತ್ತು ಇನ್ನೊಂದು ಕೋಲಾರ, ಚಿತ್ತೂರು, ರಾಣಿಪೇಟ್ ಮತ್ತು ಕಾಂಚೀಪುರಂ ಮೂಲಕ 335 ಕಿಮೀ ಉದ್ದದ ರಸ್ತೆಗಳ ಸೇವೆ ನೀಡುತ್ತಿವೆ. ಹೊಸ ಯೋಜನೆಯ ಪ್ರಕಾರ ಈ ರಸ್ತೆಯು ಕರ್ನಾಟಕ (71 ಕಿಮೀ), ಆಂಧ್ರಪ್ರದೇಶ (85 ಕಿಮೀ) ಮತ್ತು ತಮಿಳುನಾಡು (106 ಕಿಮೀ) ಮೂರು ರಾಜ್ಯಗಳ ಮೂಲಕ ಹಾದು ಹೋಗುತ್ತದೆ ಮತ್ತು ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಎನ್‌ಎಚ್‌ಎಐ ಹಿರಿಯ ತಾಂತ್ರಿಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸುರಕ್ಷತೆ ಹಿನ್ನೆಲೆ ರಸ್ತೆಯಲ್ಲಿ ಪಾದಚಾರಿ ಮತ್ತು ವಾಹನ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇ ಎತ್ತರಿಸಿದ ಸೇತುವೆಗಳು, ಅಂಡರ್‌ಪಾಸ್‌ಗಳು ಮತ್ತು ಟೋಲ್ ಪ್ಲಾಜಾಗಳನ್ನು ಸಹ ಹೊಂದಿದೆ.
ಇದನ್ನೂ ಓದಿ: ಕಿಮ್ಸ್ ಆಸ್ಪತ್ರೆ ಮತ್ತೊಂದು ಸಾಧನೆ: ಮೊದಲ ಬಾರಿಗೆ ಓಪನ್ ಹಾರ್ಟ್ ಸರ್ಜರಿ ಮಾಡಿ ಇಬ್ಬರ ಜೀವ ಉಳಿಸಿದ ವೈದ್ಯರು