ಲುಧಿಯಾನಾ(ಪಂಜಾಬ್) : ಕೇವಲ 11 ವರ್ಷದ ಅಪ್ರಾಪ್ತೆಯೊಬ್ಬಳು ಅತ್ಯಾಚಾರಕ್ಕೆ ಒಳಗಾಗಿ ಗಂಡು ಮಗುವಿಗೆ ತಾಯಿಯಾಗಿರುವ ಹೃದಯವಿದ್ರಾವಕ ಘಟನೆ ಪಂಜಾಬ್ನ ಲುಧಿಯಾನಾ ಸಮೀಪ ನಡೆದಿದೆ.
ಲುಧಿಯಾನಾ ಸಮೀಪದ ಮಚಿವಾಡ ನಗರದಲ್ಲಿ ಅಪ್ರಾಪ್ತ ಬಾಲಕಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿ, ಅತ್ಯಾಚಾರವೆಸಗಿದ್ದಾನೆ. ಇದರ ಪರಿಣಾಮವಾಗಿ ಆಕೆ ಗಂಡು ಮಗುವಿಗೆ ಜನ್ಮ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ನಡೆದದ್ದಿಷ್ಟು..: ಸುಮಾರು 10 ತಿಂಗಳ ಹಿಂದೆ ಬಾಲಕಿ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಆಕೆಯನ್ನು ಪ್ರೀತಿಸುವುದಾಗಿ ನಂಬಿಸಿದ್ದಾನೆ.
ಇದರ ಜೊತೆಗೆ ಬಾಲಕಿಯೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿದ ಆತ, ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ್ದಾನೆ. ಬಾಲಕಿ ಗರ್ಭಿಣಿಯಾದಾಗ ಮದುವೆಯಾಗಲು ನಿರಾಕರಿಸಿದ್ದಾನೆ.
ಈ ವಿಚಾರ ತಿಳಿದ ಬಾಲಕಿಯ ಕುಟುಂಬಸ್ಥರು, ಮಹಿಳೆಯೊಬ್ಬರ ಸಹಾಯ ಕೇಳಿದ್ದಾರೆ. ಆದರೆ, ಮಹಿಳೆ ಬಾಲಕಿಯ ಕುಟುಂಬಸ್ಥರಿಂದ ಹಣ ಪಡೆದು ವಂಚಿಸಿದ್ದಾರೆ. ಆಕೆಗೆ ವಿವಾಹ ಮಾಡದೇ, ಆರೋಪಿಯ ಪರವಾಗಿ ನಿಂತಿದ್ದಾರೆ. ಇದರ ಜೊತೆಗೆ ಸಂತ್ರಸ್ತೆಯನ್ನು ಕೆಲವು ದಿನಗಳ ಕಾಲ ತನ್ನ ಮನೆಯಲ್ಲಿಯೇ ಇರಿಸಿಕೊಂಡು ನಿತ್ಯ ಹಿಂಸೆ ನೀಡಿದ್ದಾರೆ.
ಇದಕ್ಕೆ ಅಸಮಾಧಾನಗೊಂಡ ಸಂತ್ರಸ್ತೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು, ಗರ್ಭಿಣಿಯಾಗಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿ ಆಸ್ಪತ್ರೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.
ಇದನ್ನೂ ಓದಿ: ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ.. ರೋಗಿ ಸಂಬಂಧಿಕ ಸ್ಥಳದಲ್ಲೇ ಸಾವು!
ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮತ್ತೊಂದೆಡೆ ಸಂತ್ರಸ್ತೆಯ ಕುಟುಂಬದವರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದು, ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ.