ಸಹರಾನ್ಪುರ ( ಉತ್ತರ ಪ್ರದೇಶ ): ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿ ಮನೆಗೆ ಮರಳಿದ ಇಬ್ಬರು ಶಿಕ್ಷಕಿಯರು ಸೇರಿದಂತೆ ಒಟ್ಟು 11 ಶಿಕ್ಷಕರು ಕೋವಿಡ್ ಸೋಂಕಿಗೆ ಬಲಿಯಾಗದ್ದಾರೆ. ಈ ವಿಚಾರ ಚುನಾವಣಾ ಕರ್ತವ್ಯ ನಿರ್ವಹಿಸಿದ ಇತರ ಶಿಕ್ಷಕರಲ್ಲಿ ಆತಂಕ ಸೃಷ್ಟಿಸಿದೆ.
ಕೋವಿಡ್ ಸೋಂಕಿನಿಂದ ಶಿಕ್ಷಕರು ಮೃತಪಟ್ಟ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಚುನಾವಣಾ ಕರ್ತವ್ಯ ನಿರ್ವಹಿಸಿದ ಇತರ ಹಲವು ಶಿಕ್ಷಕರು ಕಳೆದ 13 ದಿನಗಳಿಂದ ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಚುನಾವಣಾ ಕರ್ತವ್ಯದಿಂದ ಮರಳಿದ 4 ಶಿಕ್ಷಕರು ಮೃತಪಟ್ಟಿರುವುದನ್ನು ಚುನಾವಣಾ ಅಧಿಕಾರಿ ಬಿ.ಎಸ್.ರಮೇಂದ್ರ ಕುಮಾರ್ ಒಪ್ಪಿಕೊಂಡಿದ್ದು, ಕ್ಯಾಮರಾ ಮುಂದೆ ಹೇಳಲು ನಿರಾಕರಿಸಿದ್ದಾರೆ.
ಚುನಾವಣಾ ಕರ್ತವ್ಯ ನಿರ್ವಹಿಸಿದವರಿಗೆ ಕೋವಿಡ್ ಪಾಸಿಟಿವ್:
ಸಹರಾನ್ಪುರ ಜಿಲ್ಲೆಯ ಗ್ರಾಮ ಪಂಚಾಯತ್ಗಳಿಗೆ ನಡೆಯುತ್ತಿರುವ ಮೂರು ಹಂತಗಳ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 15ರಂದು ನಡೆಯಿತು. 884 ಗ್ರಾಮ ಪಂಚಾಯತ್ಗಳ 1,236 ಮತಗಟ್ಟೆಗಳಿಗೆ 3,283 ಶಿಕ್ಷಕರನ್ನು ಕರ್ತವ್ಯಕ್ಕೆ ನೇಮಿಸಲಾಗಿತ್ತು. ಈ ಶಿಕ್ಷಕರಿಗೆ ಏಪ್ರಿಲ್ 7ರಿಂದ ಚುನಾವಣಾ ಕರ್ತವ್ಯದ ತರಬೇತಿ ನೀಡಲಾಗಿತ್ತು. ಕೋವಿಡ್ ನಡುವೆಯೂ ಇವರೆಲ್ಲರೂ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮನೆಗೆ ಮರಳಿದ ಬಳಿಕ ಬಹುತೇಕ ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ.
11 ಶಿಕ್ಷಕರು ಸಾವು:
ಪಂಚಾಯತ್ ಚುನಾವಣೆಯ ಕರ್ತವ್ಯದಲ್ಲಿದ್ದಾಗ ಕೋವಿಡ್ ಸೋಂಕಿಗೆ ತುತ್ತಾದ ಇಬ್ಬರು ಶಿಕ್ಷಕಿಯರು ಸೇರಿದಂತೆ ಒಟ್ಟು 11 ಶಿಕ್ಷಕರು ಮೃತಪಟ್ಟಿದ್ದಾರೆ. ಈ ವಿಚಾರ ಸರ್ಕಾರಿ ಶಿಕ್ಷಕರಲ್ಲಿ ಆತಂಕ ಉಂಟುಮಾಡಿದೆ. ಮನೆಗೆ ಮರಳಿದ ಶಿಕ್ಷಕರು ಈಗ ತಮ್ಮ ಕುಟುಂಬ ಸದಸ್ಯರ ಬಗ್ಗೆ ಚಿಂತಿತರಾಗಿದ್ದಾರೆ. ಕೆಲವು ಶಿಕ್ಷಕರು ತಮ್ಮ ಮನೆಗಳಲ್ಲಿ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಶಿಕ್ಷಕರ ಸಾವನ್ನು ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ. ಕೆಲವು ಶಿಕ್ಷಕರಿಗೆ ಚುನಾವಣೆಗಿಂತ ಮೊದಲೇ ಆರೋಗ್ಯ ಹದೆಗೆಟ್ಟಿತ್ತು. ಆದರೂ, ಅವರಿಂದ ಕೆಲಸ ಮಾಡಿಲಾಗಿದೆ. ಕೋವಿಡ್ ಟೆಸ್ಟ್ ಕೂಡ ಮಾಡಿಸಿಲ್ಲ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.