ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ 11ನೇ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಇಂದು ಮಧ್ಯಾಹ್ನ ಪದಗ್ರಹಣ ಮಾಡಲಿದ್ದಾರೆ. ಧಾಮಿ ಜೊತೆಗೆ ಸಚಿವ ಸಂಪುಟ ನೂತನ ಸಚಿವರೂ ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದು, ಡೆಹ್ರಾಡೂನ್‌ನ ಪರೇಡ್ ಮೈದಾನದಲ್ಲಿ ಬೃಹತ್ ಸಮಾರಂಭ ನಡೆಯಲಿದೆ.
ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವರು ಭಾಗವಹಿಸಲಿದ್ದಾರೆ. ಧಾಮಿ ಅವರೊಂದಿಗೆ 11 ಮಂದಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಮಹಿಳೆಯವರು ಸೇರಿದಂತೆ ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಡೆಹ್ರಾಡೂನ್‌ನಲ್ಲಿನ ರಾಜ್ಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಂಗಳವಾರ ರಾಜ್ಯದ ಬಿಜೆಪಿಯ ಕೇಂದ್ರ ವೀಕ್ಷಕರಾದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಹಿರಿಯ ನಾಯಕಿ ಮೀನಾಕ್ಷಿ ಲೇಖಿ ಮತ್ತು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಎರಡನೇ ಅವಧಿಗೆ ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು. ಸಭೆಯಲ್ಲಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಪುಷ್ಕರ್ ಸಿಂಗ್ ಧಾಮಿ ವಿಧಾನಸಭೆ ಚುನಾವಣೆಯಲ್ಲಿ ಖತೀಮಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಆದ್ದರಿಂದ ಹೊಸಬರಿಗೆ ಬಿಜೆಪಿ ಮಣೆ ಹಾಕಲಿದೆ ಎಂಬ ನಿರೀಕ್ಷೆ ಹುಟ್ಟಿತ್ತು. ಶಾಸಕರಾದ ಸತ್ಪಾಲ್ ಮಹಾರಾಜ್, ಧನ್ಸಿಂಗ್ ರಾವತ್, ಕೇಂದ್ರದ ಮಾಜಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಅವರ ಹೆಸರುಗಳು ಸಹ ಸಿಎಂ ರೇಸ್ಗೆ ಕೇಳಿ ಬಂದಿದ್ದವು. ಆದರೆ, ಕೊನೆಗೆ 10 ದಿನಗಳ ಕಾಲ ನಡೆದ ಕಸರತ್ತಿಗೆ ಬಿಜೆಪಿ ತೆರೆ ಎಳೆದಿತ್ತು.
2012ರಿಂದಲೂ ಖತೀಮಾದಲ್ಲಿ ಅಜೇಯರಾಗಿದ್ದ ಧಾಮಿ ಅವರಿಗೆ ಈ ಬಾರಿ ಸೋಲು ಎದುರಾಗಿದೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 70 ಸ್ಥಾನಗಳ ಪೈಕಿ, 47ರಲ್ಲಿ ಜಯಿಸಿ ಸ್ಪಷ್ಟ ಬಹುಮತ ಪಡೆದಿದೆ.
ಇದನ್ನೂ ಓದಿ: 45 ವರ್ಷದ ವ್ಯಕ್ತಿ ಜೊತೆ 16ರ ಬಾಲೆಯ ಮದುವೆ, ಹೆಣ್ಣು ಮಗುವಿಗೆ ಜನ್ಮ; 22 ವರ್ಷದ ಯುವಕನೊಂದಿಗೆ ಪರಾರಿ!