ಮಥುರಾ (ಉತ್ತರಪ್ರದೇಶ): ತನ್ನ ಗೆಳೆಯನೊಂದಿಗೆ ಇದ್ದಾಗ ಅಶ್ಲೀಲ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡಿದ್ದಕ್ಕಾಗಿ ಮನನೊಂದ 10 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಡಿಸೆಂಬರ್ 6 ರಂದು ಸಂಜೆ 4 ಗಂಟೆ ಸುಮಾರಿಗೆ ವಿದ್ಯಾರ್ಥಿನಿ ಮೂರನೇ ಮಹಡಿಯಿಂದ ಜಿಗಿದಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನ ಕಂಡ ಸ್ಥಳೀಯರು ಕುಟುಂಬಸ್ಥರಿಗೆ ಮಾಹಿತಿ ನೀಡಿ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಎರಡು ದಿನಗಳ ನಂತರ ವಿದ್ಯಾರ್ಥಿಗೆ ಪ್ರಜ್ಞೆ ಬಂದಿದೆ. ಇದರ ನಂತರ, ವಿದ್ಯಾರ್ಥಿನಿಯು ತನಗೆ ದುಷ್ಕರ್ಮಿಗಳು ಬೆದರಿಕೆ ಹಾಕುತ್ತಿರುವ ಬಗ್ಗೆ ಕುಟುಂಬಕ್ಕೆ ತಿಳಿಸಿದ್ದಾಳೆ. ನಂತರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸ್ನೇಹಿತನ ಜೊತೆಗಿದ್ದಾಗ ವಿಡಿಯೋ: ವಿದ್ಯಾರ್ಥಿನಿ ಮಥುರಾ ಜಿಲ್ಲೆಯ ಹೈವೇ ಪೊಲೀಸ್ ಠಾಣೆ ವ್ಯಾಪ್ತಿಯ ವಿಕಾಸ್ ನಗರ ಕಾಲೋನಿಯಲ್ಲಿರುವ ಕೆಫೆಗೆ ಸ್ನೇಹಿತನೊಂದಿಗೆ ಹೋಗಿದ್ದಳು. ಕೆಫೆಯ ನಿರ್ವಾಹಕ ಮತ್ತ ಸಿಬ್ಬಂದಿ ಇವರಿಬ್ಬರ ಅಶ್ಲೀಲ ವಿಡಿಯೋ ಮಾಡಿದ ಆರೋಪವಿದೆ. ನಂತರ ಅವರು ವಿದ್ಯಾರ್ಥಿನಿಗೆ ಬ್ಲ್ಯಾಕ್ಮೇಲ್ ಮಾಡಲು ಪ್ರಾರಂಭಿಸಿದ್ದಾರೆ. ಇದನ್ನು ಸಹಿಸಲಾಗದೇ ವಿದ್ಯಾರ್ಥಿನಿ ಕಾಶಿರಾಮ್ ಕಾಲೋನಿಗೆ ಆಗಮಿಸಿ ಮೂರನೇ ಮಹಡಿಯಿಂದ ಹಾರಿದ್ದಾಳೆ.
ಆರೋಪಿಗಳ ಶೀಘ್ರ ಬಂಧನ: ಕೆಫೆಯ ಸಿಬ್ಬಂದಿ ಮೇಲೆ ವಿದ್ಯಾರ್ಥಿನಿ ತನಗೆ ಬ್ಲ್ಯಾಕ್ಮೇಲ್ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿರುವವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್ಪಿ ಮಾರ್ತಾಂಡ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
ಸಾವಿಗೆ ಕಾರಣವಾಯ್ತಾ ಪರೀಕ್ಷಾ ನಕಲು: ಪರೀಕ್ಷೆಯಲ್ಲಿ ನಕಲು ಮಾಡಿ ಉಪನ್ಯಾಸಕರ ಕೈಗೆ ಸಿಕ್ಕಿ ಬಿದ್ದ ಬಳಿಕ, ತನ್ನ ಮರ್ಯಾದೆ ಹಾಳಾಯ್ತು ಎಂಬ ಕಾರಣಕ್ಕೆ ಕಾಲೇಜಿನ ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು.
ಚನ್ನರಾಯಪಟ್ಟಣ ಸಮೀಪದ ಹೊನ್ನ ಶೆಟ್ಟಿಹಳ್ಳಿ ಗ್ರಾಮದ ಯುವತಿ ಹಾಸನ ನಗರದ ಹೊರವಲಯದಲ್ಲಿರುವ ಕಾಲೇಜೊಂದರಲ್ಲಿ ಡಿಪ್ಲೋಮಾ ಪ್ರಥಮ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆ ವೇಳೆ ನಕಲು ಮಾಡುತ್ತಿದ್ದಾಗ ಉಪನ್ಯಾಸಕ ಕೈಗೆ ಸಿಕ್ಕಿಬಿದ್ದಿದ್ದಳು. ಆಕೆಯನ್ನು ಪರೀಕ್ಷೆಯಿಂದ ಹೊರ ಕಳುಹಿಸಲಾಗಿತ್ತು.
ಇದನ್ನೂ ಓದಿ: ಕೋಟಾ: ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುಪಿ ವಿದ್ಯಾರ್ಥಿನಿ ಆತ್ಮಹತ್ಯೆ