ಕೊಯಮತ್ತೂರು(ತಮಿಳುನಾಡು): ಮಹಿಳೆಯರು ಈಗ ಎಲ್ಲಾ ರಂಗಗಳಲ್ಲಿದ್ದಾರೆ. ವಾಹನ ಚಾಲಕರಾಗಿರುವುದು ವಿಶೇಷವೇನಿಲ್ಲ. ಆದರೆ ಸುಮಾರು ನೂರು ವರ್ಷಗಳ ಇತಿಹಾಸವಿರುವ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಪುರಸಭೆಗೆ ಇದೇ ಮೊದಲ ಬಾರಿಗೆ ಮಹಿಳಾ ಚಾಲಕಿಯೊಬ್ಬರು ನೇಮಕಗೊಂಡಿದ್ದಾರೆ. ಅವರ ಹೆಸರು ಶಾಂತಿ. ಶಾಂತಿಯ ಪತಿ ನಾಗರಾಜ್ ಮೃತಪಟ್ಟಿದ್ದು, ಮೂರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಚಾಲನಾ ವೃತ್ತಿಯಿಂದ ಬಂದ ಆದಾಯದಿಂದಲೇ ಪೋಷಿಸಿ, ಕುಟುಂಬವನ್ನು ಪೊರೆಯುತ್ತಿದ್ದಾರೆ.
ಶಾಂತಿ ಅವರು ತಮಗೆ ಇಷ್ಟವಾದ ಕಾರಣಕ್ಕೆ ವಾಹನದ ಚಾಲನೆ ಮಾಡುವುದನ್ನು ಕಲಿತರು. ಅದೂ ಯಾರ ಸಹಾಯವೂ ಇಲ್ಲದೇ ಕಲಿತರು ಎಂಬುದು ವಿಶೇಷ. ವಾಹನ ಚಾಲನೆಯ ಲೈಸೆನ್ಸ್ ಕೂಡಾ ಪಡೆದುಕೊಂಡಿದ್ದಾರೆ. ಈ ವಿಚಾರ ಪೊಲ್ಲಾಚಿ ಪುರಸಭೆ ಅಧ್ಯಕ್ಷರಾದ ಶ್ಯಾಮಲಾ ನವನೀತಕೃಷ್ಣನ್ ಅವರಿಗೆ ತಿಳಿದಿದೆ. ನಂತರ ಅವರನ್ನು ಪೊಲ್ಲಾಚಿ ಪುರಸಭೆಯಲ್ಲಿ ಟಾಟಾ ಏಸ್ ವಾಹನ ಚಾಲನೆಗೆ ಅವಕಾಶ ಮಾಡಿಕೊಡಲಾಗಿದೆ. ಪುರಸಭೆಯಿಂದ ನೇಮಕಗೊಂಡ ಮೊದಲ ಚಾಲಕಿ ಎಂಬ ಹೆಮ್ಮೆಗೆ ಶಾಂತಿ ಪಾತ್ರರಾಗಿದ್ದಾರೆ.
ಪತಿಯನ್ನು ಕಳೆದುಕೊಂಡು ನಾಲ್ವರು ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ನನಗೆ ಸಂಸಾರ ನಡೆಸಲು ಸಾಕಾಗುವಷ್ಟು ಆದಾಯ ಇರಲಿಲ್ಲ. ಆಮೇಲೆ ಡ್ರೈವಿಂಗ್ ಕಲಿಯಲು ನಿರ್ಧರಿಸಿದೆ. ನಾನೇ ಕಲಿತು ಕೊಚ್ಚಿನ್, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಓಡಾಡಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಸಣ್ಣ ಅಪಘಾತವೂ ಆಗದೆ ವಾಹನ ಚಲಾಯಿಸುತ್ತಿದ್ದೇನೆ. ಕಾರು, ಹೆವಿ ವಾಹನಗಳನ್ನು ಓಡಿಸುತ್ತಿದ್ದೇನೆ. ಕೊರೊನಾ ಕಾಲದಲ್ಲಿ ತುಂಬಾ ಕಷ್ಟಪಟ್ಟಿದ್ದೆ. ಮನೆ ಬಾಡಿಗೆ ಕಟ್ಟಲಾಗದೆ ಊಟಕ್ಕೂ ಪರದಾಡಿದ್ದೆ. ಕಳೆದ ಬಾರಿ ಇದೇ ಡ್ರೈವರ್ ಕೆಲಸಕ್ಕೆ ಅರ್ಜಿ ಹಾಕಿದ್ದೆ ಆದರೆ ಸಿಕ್ಕಿರಲಿಲ್ಲ. ಈಗ ಕೆಲಸ ಸಿಕ್ಕಿದೆ ಎಂದು ಶಾಂತಿ ಹೇಳಿಕೊಂಡಿದ್ದು, ಮಹಿಳೆಯರು ಎಲ್ಲಾ ರಂಗದಲ್ಲೂ ಸಾಧನೆ ಮಾಡಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೇಂದ್ರದ ನಿರ್ಲಕ್ಷ್ಯದಿಂದ ಕೋವಿಡ್ ಸೋಂಕಿಗೆ 40 ಲಕ್ಷ ಮಂದಿ ಸಾವು: ರಾಹುಲ್ ಗಾಂಧಿ