ನವಸಾರಿ(ಗುಜರಾತ್): ಗುಜರಾತ್ನಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಮತ್ತು ಬಸ್ ಮಧ್ಯೆ ಡಿಕ್ಕಿಯಾಗಿ 10 ಮಂದಿ ದುರ್ಮರಣ ಹೊಂದಿದ್ದಾರೆ. ಘಟನೆ ಬಳಿಕ ಬಸ್ ಚಾಲಕನ ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ.
ನವಸಾರಿ ಜಿಲ್ಲೆಯ ವೆಸ್ಮಾ ಬಳಿಯ ಹೆದ್ದಾರಿ 48 ರಲ್ಲಿ ಈ ದುರಂತ ನಡೆದಿದೆ. ಅತಿವೇಗವಾಗಿ ಬಂದ ಫಾರ್ಚುನರ್ ಕಾರು ಡಿವೈಡರ್ಗೆ ಗುದ್ದಿ ಹಾರಿಬಿದ್ದು ಬಸ್‌ಗೆ ಅಪ್ಪಳಿಸಿದೆ. ಕಾರಿನಲ್ಲಿದ್ದ 9 ಜನರ ಪೈಕಿ 8 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಜನರು ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಹೃದಯಾಘಾತಕ್ಕೀಡಾಗಿ ಚಾಲಕ ಮೃತಪಟ್ಟಿದ್ದಾನೆ.
ಇದಲ್ಲದೇ ಬಸ್ಸಿನಲ್ಲಿದ್ದ 30 ಜನರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಕಾರಿನಲ್ಲಿದ್ದ ಓರ್ವನನ್ನು ಸೂರತ್ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಸ್ನಲ್ಲಿದ್ದ ಜನರ ಪೈಕಿ 11 ಮಂದಿಗೂ ಗಾಯವಾಗಿದ್ದು, ನವಸಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು, ರಕ್ಷಣಾ ಪಡೆಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿವೆ. ಅಫಘಾತದ ರಭಸಕ್ಕೆ ಕಾರು ನುಜ್ಜುಗಾಗಿದ್ದರೆ, ಬಸ್ನ ಮುಂಭಾಗ ಪೂರ್ಣ ಜಖಂಗೊಂಡಿದೆ.
2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಪ್ರಧಾನಿ: ಗುಜರಾತ್ನ ನವಸಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಾದ ಜೀವಹಾನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮರುಗಿದ್ದಾರೆ. ಘಟನೆ ನೋವು ತಂದಿದೆ. ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ. ಮಡಿದವರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. 29 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬಳಿಕ ಎದುರಿನಿಂದ ಬಂದ ಬಸ್‌ಗೆ ರಭಸವಾಗಿ ಗುದ್ದಿದೆ. ಹೆದ್ದಾರಿ ಗಸ್ತು ತಂಡ ತಕ್ಷಣ ಸ್ಪಂದಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ ಎಂದು ನವಸಾರಿ ಎಸ್ಪಿ ಋಷಿಕೇಶ್ ಉಪಾಧ್ಯಾಯ ತಿಳಿಸಿದರು.
ಓದಿ: ಇನ್ನು ಮನೆ ಬಾಗಿಲಿಗೇ ಬರಲಿದೆ ಮರಳು.. ಆ್ಯಪ್ ಮೂಲಕ ಬುಕ್ ಮಾಡಿದರೆ ಸಾಕು ತಕ್ಷಣ ಸರಬರಾಜು!