ಚೆನ್ನೈ (ತಮಿಳುನಾಡು): ವಿದೇಶಗಳಿಂದ ತಮಿಳುನಾಡಿನ ಚೆನ್ನೈನ ವಿದೇಶಿ ಅಂಚೆ ಕಚೇರಿಗೆ ಬಂದ ಪೋಸ್ಟಲ್ ಪಾರ್ಸೆಲ್‌ಗಳಲ್ಲಿ ಜೀವಂತ ಜೇಡಗಳು ಮತ್ತು ಎನ್‌ಡಿಪಿಎಸ್ ನಿಷೇಧಿತ ಮಾದಕ ವಸ್ತುಗಳು ಕಂಡು ಬಂದಿದ್ದು, ಚೆನ್ನೈ ಏರ್ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಮಾಹಿತಿಯ ಆಧಾರದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಕಳೆದ ಗುರುವಾರ ಚೆನ್ನೈನ ವಿದೇಶಿ ಅಂಚೆ ಕಚೇರಿಗೆ ಬಂದು ಶೋಧ ನಡೆಸಿದ್ದಾರೆ. ಈ ವೇಳೆ, ಪೋಲ್ಯಾಂಡ್ನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಂನ ವ್ಯಕ್ತಿಯೊಬ್ಬನಿಗೆ ಕಳುಹಿಸಲಾಗಿರುವ ಪಾರ್ಸಲ್ನಲ್ಲಿ 10 ಸಣ್ಣ ಸಣ್ಣ ಬಾಟಲಿಗಳು - ಆ ಬಾಟಲಿಯೊಳಗೆ ಹತ್ತಿಯೊಂದಿಗೆ ಜೀವಂತ ಜೇಡಗಳು ಇದ್ದವು. ಕಸ್ಟಮ್ಸ್ ಆಕ್ಟ್ - 1962 ಅಡಿ ಇವುಗಳ ಆಮದು ಕಾನೂನು ಬಾಹಿರವಾಗಿದ್ದು, ಇದನ್ನು ಪೋಲ್ಯಾಂಡ್ಗೆ ಹಿಂದಿರುಗಿಸಲು ಪೋಸ್ಟಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: 'ನನ್ನ ಒಂದೊಂದು ರೂಪಾಯಿಯೂ ಮತ್ತೊಬ್ಬರ ಜೀವ ಉಳಿಸಲು ಕಾಯುತ್ತಿದೆ' - IT ದಾಳಿಗೆ ಸೋನು ಉತ್ತರ
ಇದಲ್ಲದೇ ನೆದರ್ಲ್ಯಾಂಡ್ ಮತ್ತು ಅಮೆರಿಕದಿಂದ ಬಂದ ಮೂರು ಪೋಸ್ಟಲ್ ಪಾರ್ಸೆಲ್‌ಗಳಲ್ಲಿ 274 ಗ್ರಾಂ ಗಾಂಜಾ, ಎಂಡಿಎಂಎ ಮಾತ್ರೆಗಳು, ಚರಾಸ್ ಸೇರಿದಂತೆ ಎನ್‌ಡಿಪಿಎಸ್ ನಿಷೇಧಿತ ಮಾದಕ ವಸ್ತುಗಳು ಸಿಕ್ಕಿದ್ದು, ಎನ್‌ಡಿಪಿಎಸ್ ಕಾಯ್ದೆ- 1985 ರ ಅಡಿ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಬಗ್ಗೆ ತನಿಖೆ ಚುರುಕುಗೊಳಿಸಿರುವುದಾಗಿ ಕಸ್ಟಮ್ಸ್ ಆಯುಕ್ತರು ತಿಳಿಸಿದ್ದಾರೆ.