ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಎಲ್ಲ ಜಿಲ್ಲಾ ನಾಯಕರ ಜೊತೆಗೆ ಕೂಡ ಸಂವಹನ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಕರೆಯಲಾಗಿದ್ದ ಕೋರ್ ಕಮಿಟಿ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ’’ಬೆಳಗಾವಿ ಜಿಲ್ಲೆಯಲ್ಲಿ 18ಕ್ಕೆ 18 ಕ್ಷೇತ್ರ ಗೆಲ್ಲಲು ಒನ್ ಟೂ ಒನ್ ಮಾತನಾಡಿದ್ದೇನೆ. ಏಪ್ರಿಲ್ 8 ಅಥವಾ 9ರಂದು ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಎಲ್ಲರೂ ಸನ್ನದ್ಧರಾಗಿ ಎಂದು ಸಹ ಸೂಚಿಸಿದ್ದೇನೆ. ಸಾಮಾನ್ಯವಾಗಿ 18ಕ್ಕೆ 16 ಸ್ಥಾನ ಗೆಲ್ಲುತ್ತೇವೆ ಅಂತಾ ಹೇಳುತ್ತಿದ್ದರು. ಆದರೆ, ಈ ಸಾರಿ 18 ಸ್ಥಾನ ಗೆಲ್ಲಬೇಕು ಎಂಬ ನಿರ್ಣಯ ಮಾಡಿದ್ದೇವೆ. ಅಂದುಕೊಂಡಿದ್ದನ್ನು ಮಾಡುತ್ತೇವೆ‘‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಥಣಿ ಕ್ಷೇತ್ರ ಟಿಕೆಟ್ ಗೊಂದಲ ವಿಚಾರಕ್ಕೆ ಮಹೇಶ ಕುಮಟಳ್ಳಿ ಮತ್ತು ಲಕ್ಷ್ಮಣ ಸವದಿ ಜೊತೆಗೆ ಮಾತನಾಡಿದ್ದೇನೆ. ಟಿಕೆಟ್ ವಿಚಾರದಲ್ಲಿ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಅದಕ್ಕೆ ಬದ್ಧ ಇರಬೇಕು ಎಂದಿದ್ದೇನೆ. ಬಹಿರಂಗವಾಗಿ ಯಾರೂ ಮಾತಾಡಬೇಡಿ ಅಂತಲೂ ಹೇಳಿದ್ದೇನೆ. ಒಂದೇರಡು ಸಣ್ಣ-ಪುಟ್ಟ ತೊಂದರೆಗಳಿವೆ. ಅವುಗಳನ್ನು ಸಹ ಸರಿ ಮಾಡಿದ್ದೇನೆ. ನಾವು ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ನಾವು ಒಗ್ಗಟ್ಟು ಇಲ್ಲ ಎನ್ನುವ ಪ್ರಶ್ನೆ ಇಲ್ಲ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.
ಜಾರಕಿಹೊಳಿ ಸಹೋದರರ ಕ್ಷೇತ್ರ ಬದಲಾವಣೆ ಮಾಡಬೇಕು ಎನ್ನುವ ವಿಚಾರಕ್ಕೆ ಅದು ಗುಪ್ತ ವಿಚಾರ, ಅದನ್ನು ಪಾರ್ಟಿಯಲ್ಲಿ ಚರ್ಚೆ ಮಾಡುತ್ತೇವೆ. ನಾವು ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಪ್ರಹ್ಲಾದ ಜೋಶಿ ಹೇಳಿದರು. ಇದಕ್ಕೂ ಮುನ್ನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜಿಲ್ಲೆಯ ನಾಯಕರನ್ನು ಬೇರೆ ಕೊಠಡಿಯಲ್ಲಿ ಒಟ್ಟಾಗಿ ಕರೆದು ಮಹತ್ವದ ಸಭೆ ನಡೆಸುವ ಮೂಲಕ ಭಿನ್ನಮತ ಶಮನಗೊಳಿಸಲು ಕಸರತ್ತು ಮಾಡಿದರು.
ಕುಂದಾನಗರಿಯಲ್ಲಿಂದು ದಿಢೀರ್ ಜಿಲ್ಲಾ ಮಟ್ಟದ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿತ್ತು. ನಗರದ ಖಾಸಗಿ ಹೋಟೆಲ್ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ಭಾಗಿಯಾಗಿದ್ದರು. ಅಲ್ಲದೇ ಜಿಲ್ಲೆಯ 11 ಕ್ಷೇತ್ರದ ಹಾಲಿ ಬಿಜೆಪಿ ಶಾಸಕರು, ಇಬ್ಬರು ಸಂಸದರು, ಓರ್ವ ರಾಜ್ಯಸಭೆ ಸದಸ್ಯರು ಪಾಲ್ಗೊಂಡಿದ್ದರು.
ಸಭೆ ಆರಂಭ ಆಗುವುದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಪ್ರಹ್ಲಾದ ಜೋಶಿ, "ಈಗಾಗಲೇ ರಾಜ್ಯಾದ್ಯಂತ ನಮ್ಮ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಎಲ್ಲ ಕೋರ್ ಕಮಿಟಿ ಸದಸ್ಯರ ಸಭೆ ನಡೆಸಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಎಸ್‌ವೈ, ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಗೋವಿಂದ ಕಾರಜೋಳ ಹಾಗೂ ಪ್ರಮುಖರು ಸೇರಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದೇವೆ.
ಕಾರ್ಯಕರ್ತರ ಅಭಿಪ್ರಾಯ ಮತ್ತು ಕೋರ್ ಕಮಿಟಿ ಸದಸ್ಯರು, ಮಂತ್ರಿಗಳು, ಮಾಜಿ ಶಾಸಕರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಅಳೆದು ತೂಗಿ ನೋಡಿ, ನಾಳೆ ಮತ್ತು ನಾಡಿದ್ದು ವಿಸ್ತೃತವಾಗಿ ಸಭೆ ಮಾಡಲಿದ್ದೇವೆ. ಬೆಳಗಾವಿ ಜೊತೆಗೆ ಎಲ್ಲ ಜಿಲ್ಲೆಗಳಿಗೂ ಆಧ್ಯತೆ ನೀಡಲಾಗಿದೆ. ಬೆಳಗಾವಿ ಮತ್ತು ಬೆಂಗಳೂರು ಅತೀ ಹೆಚ್ಚು ಸ್ಥಾನ ಹೊಂದಿರುವ ಹಿನ್ನೆಲೆ ಇನ್ನೂ ಕೆಲವು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.
ರಾಷ್ಟ್ರೀಯ ಸಂಸದೀಯ ಮಂಡಳಿ ಚುನಾವಣಾ ಸಮೀತಿಗೆ ಈ ವರದಿಯನ್ನು ಶಿಫಾರಸು ಮಾಡಲಾಗುವುದು. ಅದಕ್ಕೂ ಮುನ್ನ ನಾನು ಮತ್ತು ನಿರ್ಮಲಕುಮಾರ ಸುರಾನಾ ಇಲ್ಲಿಗೆ ಬಂದಿದ್ದೇವೆ. ನಮ್ಮ ಈ ಪ್ರಕ್ರಿಯೆ ಮುಗಿಸಿ ಸಾಯಂಕಾಲ ಬೆಂಗಳೂರಿಗೆ ಹೋಗುತ್ತೇವೆ'' ಎಂದಿದ್ದರು. ಅದರಂತೆ ಕೋರ್ ಕಮಿಟಿ ಸಭೆ ನಡೆಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಟಿಕೆಟ್ ಕಗ್ಗಂಟಿಗೆ ಇಂದು ಪರಿಹಾರ?: ಕುಂದಾನಗರಿಯಲ್ಲಿ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ