ಹಾವೇರಿ: ''ಶಿಗ್ಗಾಂವಿ ಜೊತೆಗೆ ಮತ್ತೊಂದು ಕ್ಷೇತ್ರದಲ್ಲಿ ನೀವು ಸ್ಪರ್ದಿಸ್ತೀರಾ ಎಂದು ಕೆಲ ಪತ್ರಕರ್ತರು ಕೇಳಿದ್ರು. ಯಾವನು ಹಾಗೆ ಹೇಳಿದ್ದು ಎಂದು ಅವರಿಗೆ ಉತ್ತರ ನೀಡಿದ್ದೇನೆ. ಇದು ನನ್ನ ಆತ್ಮವಿಶ್ವಾಸ. ಶಿಗ್ಗಾಂವಿ ಬಂಧುಗಳು ಒಳ್ಳೆಯದನ್ನು ಗುರುತಿಸ್ತಾರೆ, ಬೆಂಬಲಿಸ್ತಾರೆ. ಯಾವುದೇ ಅಪಪ್ರಚಾರ ಮಾಡಿದರೂ ಕೂಡಾ ಜನತೆ ಮಾತ್ರ ಆತ್ಮಸಾಕ್ಷಿಯಿಂದ ನನಗೆ ಬೆಂಬಲಿಸುತ್ತಾರೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ಶಿಗ್ಗಾಂವಿಯಲ್ಲಿಂದು ತಾಲೂಕು ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದೆಹಲಿಯಲ್ಲಿ ಕುಳಿತು ನನ್ನನ್ನು ಸೋಲಿಸಲು ಪ್ಲ್ಯಾನ್: ''ನನ್ನ ವಿರುದ್ಧ ಬಹಳ ದೊಡ್ಡ ಅಪಪ್ರಚಾರವಾಗಿತ್ತು. ಅಂದು ಪ್ರಮುಖ ಪತ್ರಿಕೆಯಲ್ಲಿ ಬೊಮ್ಮಾಯಿ ಗೆಲ್ಲೋದು ಸಾಧ್ಯವಿಲ್ಲ ಎಂದು ಬರೆದಿದ್ದರು. ರಿಸಲ್ಟ್ ಬಂದ ದಿನ ವಿಜಯೋತ್ಸವ ನೋಡಿ ಎಂದು ನಾನು ಆ ಪತ್ರಕರ್ತನಿಗೆ ಹೇಳಿದ್ದೆ. ಈಗಲೂ ಕೂಡಾ ಏನೇನೋ ಅಪಪ್ರಚಾರ ಮಾಡ್ತಾರೆ. ಬೆಂಗಳೂರು, ದೆಹಲಿಯಲ್ಲಿ ಕುಳಿತು ಕೆಲವರು ಬೊಮ್ಮಾಯಿಯನ್ನು ಹೇಗೆ ಸೋಲಿಸಬೇಕು ಅಂತ ಪ್ಲ್ಯಾನ್ ಮಾಡಿದ್ದೇ ಮಾಡಿದ್ದು, ಆದ್ರೆ ನಾನು ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ನನಗೆ ವಿಶ್ವಾಸ ಇರೋದು ತಾಯಂದಿರು, ಯುವಕ ಮಿತ್ರರು, ರೈತರು ಹಾಗೂ ಕ್ಷೇತ್ರದ ಎಲ್ಲಾ ಜನತೆ ಮೇಲೆ ಇದೆ'' ಎಂದರು.
''ಬೇರೆ ಬೇರೆ ಕ್ಷೇತ್ರಗಳಲ್ಲಿ ಆಹ್ವಾನ ಇದ್ದರೂ ಕೂಡಾ ನನಗೆ ಪ್ರೀತಿ ವಿಶ್ವಾಸ, ದುಡಿಮೆ ಇರೋ ಕಡೆ ಅಂದರೆ, ಶಿಗ್ಗಾವಿಯಲ್ಲಿ ಮಾತ್ರ ಪರೀಕ್ಷೆಗೆ ಇಳಿಯುತ್ತೇನೆ. ನನ್ನ ಸ್ಪರ್ಧೆ ಇರುವುದು ಶಿಗ್ಗಾವಿ ಕ್ಷೇತ್ರದಲ್ಲಿ ಮಾತ್ರ'' ಎಂದು ಬಹಿರಂಗವಾಗಿ ಒತ್ತಿ ಹೇಳಿದರು.
''ಸಮುದ್ರ ಮಂಥನ ಆಗಲಿದ್ದು, ಏನೇ ವಿಷ ಬಂದರೂ ಸ್ವೀಕಾರ ಮಾಡಿ ಜನರಿಗೆ ಮಾತ್ರ ಅಮೃತ ನೀಡುತ್ತೇನೆ. ಏನೇ ಅಪಪ್ರಚಾರ ಮಾಡಲಿ. ಆತ್ಮ ಸಾಕ್ಷಿಯಿಂದ ನಿರ್ಣಯ ಕೈಗೊಂಡಿದ್ದೇನೆ. ಮೀಸಲಾತಿ ಕುರಿತ ನಿರ್ಣಯ ತೆಗೆದುಕೊಂಡಾಗ ವಿರೋಧ ಪಕ್ಷದವರು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತರು. ಇನ್ನೂ ಅವರು ಯಾವುದೇ ಕಾರಣಕ್ಕೂ ತಲೆ ಮೇಲಿನ ಕೈ ತೆಗೆಯೋದಿಲ್ಲ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಇಡೀ ದೇಶದಲ್ಲಿ ಯಾರೂ ಮಾಡಿಲ್ಲ. ಈ ಸಾಹಸ ನಿಮ್ಮ ಬಸವರಾಜ ಬೊಮ್ಮಾಯಿ ಮಾಡಿದ್ದಾನೆ'' ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಜೆಡಿಎಸ್ ತೊರೆದು ಕಾಂಗ್ರಸ್ ಟಿಕೆಟ್ ಗಿಟ್ಟಿಸಿಕೊಂಡ ಎಸ್ ಆರ್ ಶ್ರೀನಿವಾಸ್... ಹೀಗಿದೆ ಇವರ ರಾಜಕೀಯ ಹಿನ್ನೋಟ
''ಹಿಂದೆ ಶಿಗ್ಗಾಂವಿ ಕ್ಷೇತ್ರದಿಂದ ನಿಜಲಿಂಗಪ್ಪನವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡುವುದು ಬೇಡ. ನನಗೆ ಕುಸ್ತಿನೇ ಬೇಕು ಅಂದಾಗಲೇ ಯಾರ ಶಕ್ತಿ ಏನು ಅನ್ನೋದು ಗೊತ್ತಾಗುತ್ತದೆ. ಕಣಕ್ಕೆ ಯಾರು ಬರ್ತಾರೋ ಬರಲಿ, ಸೆಡ್ಡು ಹೊಡೆದೇ ಬಿಡೋದು, ಬೇರೆ ಪ್ರಶ್ನೆಯೇ ಇಲ್ಲ. ಕುಸ್ತಿ ಪಟ್ಟುಗಳನ್ನು ಪ್ರಾಕ್ಟೀಸ್ ಮಾಡಿಕೊಂಡು ಬನ್ನಿ. ನಮ್ಮ ಕುಸ್ತಿ ಪಟ್ಟುಗಳು ಹೊಸದಿರುತ್ತವೆ. ಎದುರಾಳಿಗಳು ನೆಲಕ್ಕೆ ಬಿದ್ದ ಮೇಲೆಯೇ ಎಲ್ಲವೂ ಅವರಿಗೆ ಅರಿವಾಗುತ್ತದೆ'' ಎಂದು ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು.
ಇದನ್ನೂ ಓದಿ: ಸಿಗದ ಕಾಂಗ್ರೆಸ್ ಟಿಕೆಟ್; ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾದ ಹರಪಳ್ಳಿ ರವೀಂದ್ರ