ಕೊಡಗು: ಜಿಲ್ಲಾ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದ ಹರಪಳ್ಳಿ ರವೀಂದ್ರ ಅವರಿಗೆ ಟಿಕೆಟ್ ಕೈತಪ್ಪಿದೆ. ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ನಲ್ಲಿ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಪಕ್ಷದ ಆಕಾಂಕ್ಷಿಗಳ ನಡುವೆ ಭಿನ್ನಮತ ಮೂಡಿದೆ. ಮಡಿಕೇರಿ ಕ್ಷೇತ್ರದಿಂದ ಡಾ.ಮಂತರ್ ಗೌಡ ಅಭ್ಯರ್ಥಿಯೆಂದು ಘೋಷಣೆಯಾಗಿದೆ. ಆದರೆ, ಕೊನೆಯ ಹಂತದವರೆಗೂ ನಾಲ್ವರ ಹೆಸರು ಪಟ್ಟಿಯಲ್ಲಿ ಇತ್ತು. ಡಾ.ಮಂತರ್ ಗೌಡ, ಜೀವಿಜಯ, ಹರಪಳ್ಳಿ ರವೀಂದ್ರ ಹೆಸರುಗಳಿದ್ದವು. ಕೊನೆಯ ಹಂತದಲ್ಲಿ ಡಾ.ಮಂತರ್ ಗೌಡ ಅವರಿಗೆ ಟಿಕೆಟ್ ಸಿಕ್ಕಿದೆ. ಈ ಪೈರಿ ಒಬ್ಬರು ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಣಿಯಾಗಿದ್ದಾರೆ.
ಮಡಿಕೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹರಪಳ್ಳಿ ರವೀಂದ್ರ ಮಾತನಾಡಿ, ಪಕ್ಷದ ಪ್ರಮುಖರು ಮಡಿಕೇರಿ ಕ್ಷೇತ್ರದಿಂದ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಆದರೆ, ನನಗೆ ಟಿಕೆಟ್ ಸಿಗದೇ ಇರುವುದರಿಂದ ನಾನು ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸಮಾಜಸೇವೆ ಮಾಡುತ್ತ ಬಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಮಾಡುವ ಕನಸು ಹೊಂದಿದ್ದೇನೆ. ನಾನು ಕೂಡಾ ನಮ್ಮ ಜನರ ಜೊತೆ ಚರ್ಚಿಸಿದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲು ನಿರ್ಧಾರ ಮಾಡಿದ್ದೇನೆ ಎಂದರು.
ಕಾಂಗ್ರೆಸ್ 2ನೇ ಪಟ್ಟಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 42 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಏ.7ರಂದು ಬಿಡುಗಡೆ ಮಾಡಿತ್ತು. ಕೆಲವು ದಿನಗಳವರೆಗೆ ನಡೆದ ನಿರಂತರ ಪ್ರಯತ್ನದ ಫಲವಾಗಿ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿತ್ತು. ಎರಡನೇ ಪಟ್ಟಿಗೆ 100 ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಯತ್ನದಲ್ಲಿ ರಾಜ್ಯದ ಪ್ರಮುಖರು ರಾಷ್ಟ್ರೀಯ ನಾಯಕರ ಜೊತೆಗೆ ಚರ್ಚಿಸಿ 42 ಸ್ಥಾನಗಳನ್ನು ಅಂತಿಮಗೊಳಿಸಿದ್ದರು. ಅಂತಿಮವಾಗಿ ಮೂರನೇ ಪಟ್ಟಿಯಲ್ಲಿ 58 ಘಟಾನುಘಟಿಗಳ ಹೆಸರು ಪ್ರಕಟ ಮಾಡಬೇಕಿದೆ.
'ಕೈ' ಪಕ್ಷದ ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವುದು ಸಸ್ಪೆನ್ಸ್ ಆಗಿ ಉಳಿದಿದೆ. ಪುಲಿಕೇಶಿನಗರ, ದಾಸರಹಳ್ಳಿ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯೂ ಕೂಡ ಕಗ್ಗಂಟಾಗಿಯೇ ಇದೆ. ಕೊನೆಗೂ ತೀರ್ಥಹಳ್ಳಿ ಕ್ಷೇತ್ರದ ಟಿಕೆಟ್ ಅನ್ನು ಕಿಮ್ಮನೆ ರತ್ನಾಕರ್ಗೆ ಕೊಡಲಾಗಿದೆ. ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಮಂಜುನಾಥ್ ಗೌಡರಿಗೆ ನಿರಾಸೆಯಾಗಿದೆ. ಕಡೂರು ಟಿಕೆಟ್ ಡಿಕೆಶಿ ಆಪ್ತ ಕೆ.ಎಸ್.ಆನಂದ್ಗೆ ದೊರೆತಿದ್ದು, ಭಾರಿ ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಜೆಡಿಎಸ್ ಮುಖಂಡ ವೈಎಸ್ವಿ ದತ್ತಾ ಅವರಿಗೂ ನಿರಾಸೆ ಉಂಟಾಗಿದೆ.
ಯಶವಂತಪುರ ಕ್ಷೇತ್ರದಿಂದ ಎಸ್. ಬಾಲರಾಜಗೌಡ ಅವರಿಗೆ ಟಿಕೆಟ್ ದೊರೆತಿದ್ದು, ಹಿಂದೆ ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಸಚಿವರಾಗಿರುವ ಎಸ್.ಟಿ. ಸೋಮಶೇಖರ್ ಪಕ್ಷಕ್ಕೆ ಮರಳುತ್ತಾರೆ ಎನ್ನುವ ಮಾತಿಗೆ ತೆರೆಬಿದ್ದಿದೆ. ಸಚಿವ ಸೋಮಶೇಖರ್ ವಿರುದ್ಧ ಬಾಲರಾಜಗೌಡ ಅಖಾಡಕ್ಕೆ ಇಳಿಯಲಿದ್ದಾರೆ.
ಗುರುಮಠಕಲ್ ಕ್ಷೇತ್ರದಿಂದ ಬಾಬೂರಾವ್ ಚಿಂಚನಸೂರ್ಗೆ ಟಿಕೆಟ್ ನೀಡಲಾಗಿದ್ದು, ಕೊನೆ ಕ್ಷಣದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯತ್ವ ತೊರೆದು ಬಂದಿದ್ದಕ್ಕೂ ಫಲ ಲಭಿಸಿದೆ. ಬಿಜೆಪಿ ಸೇರುವ ಮೂಲಕ 2019ರಲ್ಲಿ ಪ್ರಸ್ತುತ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಲಬುರುಗಿ ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಪರಾಭವವಾಗಲು ಕಾರಣರಾಗಿದ್ದರು. ಆದರೆ, 2ನೇ ಪಟ್ಟಿಯಲ್ಲಿ ಬಾಬೂರಾವ್ ಚಿಂಚನಸೂರ್ ಅವಕಾಶ ಪಡೆದುಕೊಳ್ಳಲು ಸಫಲರಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಅಳೆದು ತೂಗಿ ಬೆಂಗಳೂರು ಅಭ್ಯರ್ಥಿಗಳ ಆಯ್ಕೆ, ಮಹಾನಗರ ಹಿಡಿತ ಕೈಗೆ ಬಹುಮುಖ್ಯ