ಬೆಂಗಳೂರು: ನಾನು ಬಿಜೆಪಿ ಸೇರುತ್ತಿಲ್ಲ, ಬಿಜೆಪಿಗೂ ಬೆಂಬಲ ನೀಡುತ್ತಿಲ್ಲ. ಕಷ್ಟದಲ್ಲಿ ನನ್ನ ಪರ ನಿಂತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ನಿಲ್ಲುತ್ತಿದ್ದೇನೆ. ವೈಯಕ್ತಿಕವಾಗಿ ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಂತಿದ್ದೇನೆ. ಅವರು ಮತ್ತು ಅವರು ಸೂಚಿಸುವವರ ಪರ ಮಾತ್ರ ಪ್ರಚಾರ ನಡೆಸುತ್ತೇನೆ ಎಂದು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.
ನಗರದ ಖಾಸಗಿ ತಾರಾ ಹೋಟೆಲ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಯಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಿಂದಲೂ ಬಸವರಾಜ ಬೊಮ್ಮಾಯಿ ಜೊತೆ ಆತ್ಮೀಯ ಒಡನಾಟವಿದೆ. ಹಾಗಾಗಿ, ಅವರನ್ನು ನಾನು ಮಾಮ ಅಂತಾ ಕರೆಯುತ್ತೇನೆ. ಬೇರೆ ರೀತಿ ಇದನ್ನು ತೆಗೆದುಕೊಳ್ಳಬೇಡಿ. ಇಲ್ಲಿ ನಿಲುವು ಅಥವಾ ರಾಜಕೀಯ ವಿಷಯ ಬರಲ್ಲ. ಚಿಕ್ಕ ವಯಸ್ಸಿನಿಂದಲೂ ಬೊಮ್ಮಾಯಿ ಅವರನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ಚಿತ್ರರಂಗದಲ್ಲಿ ನಾನು ಸಂಕಷ್ಟದಲ್ಲಿದ್ದಾಗ ನನ್ನ ಜೊತೆ ನಿಂತವರು ನಮ್ಮ ಮಾಮ. ಅವರು ನನಗೆ ಪ್ರೀತಿಯ ವ್ಯಕ್ತಿ. ಹಾಗಾಗಿ, ನಾನು ಅವರ ಪರ ನಿಲ್ಲಲು ಬಂದಿದ್ದೇನೆ ಎಂದರು.
ಚಿತ್ರರಂಗಕ್ಕೆ ಪ್ರವೇಶಿಸಿದಾಗ ನನಗೆ ಯಾರೂ ಗಾಡ್ ಫಾದರ್ ಇರಲಿಲ್ಲ. ಆದರೆ, ಕೆಲವರು ನಮ್ಮ ಜೊತೆ ನಿಂತಿದ್ದರು. ನಮ್ಮ ಮಾಮ ಆಗ ರಾಜಕಾರಣಕ್ಕೆ ಪ್ರವೇಶ ಮಾಡುತ್ತಿದ್ದರು. ಅಂದು ಅವರು ನನ್ನ ಸಹಾಯಕ್ಕೆ ಧಾವಿಸಿದ್ದರು. ಈಗ ಆ ವ್ಯಕ್ತಿ ಪರ ನಾನು ನನ್ನ ಬೆಂಬಲ ಕೊಡುತ್ತಿದ್ದೇನೆ. ಪಕ್ಷದಲ್ಲಿ ಇನ್ನು ನನ್ನ ಕೆಲ ಸ್ನೇಹಿತರಿದ್ದಾರೆ. ಅವರ ಪರವೂ ನಾನು ನಿಲ್ಲುತ್ತೇನೆ. ನನ್ನ ಮನೆಯಲ್ಲಿ ತಂದೆ ಇದನ್ನು ಮಾಡು ಎಂದರೆ ಹೇಗೆ ಮಾಡುತ್ತೇನೋ ಹಾಗೆ ಬೊಮ್ಮಾಯಿ ಒಳ್ಳೆಯತನಕ್ಕೆ ಓಗೊಟ್ಟು ಅವರ ಜೊತೆ ಇರುತ್ತೇನೆ. ಅವರು ಹೇಳಿದವರ ಪರ ಪ್ರಚಾರ ಮಾಡುತ್ತೇನೆ ಎಂದರು.
ನಾನು ಒಂದು ಪಕ್ಷದ ಪರವಾಗಿ ನಿಲ್ಲಲು ಹೊರಟಿದ್ದರೆ ಅದನ್ನೇ ನೇರವಾಗಿ ಹೇಳುತ್ತಿದ್ದೆ. ಆದರೆ, ನಾನು ಇಂದು ಒಂದು ಪಕ್ಷದ ಪರ ಇಲ್ಲ. ಕೇವಲ ಬೊಮ್ಮಾಯಿ ಎನ್ನುವ ವ್ಯಕ್ತಿ ಪರ ನಿಂತಿದ್ದೇನೆ. ಇದು ರಾಜಕೀಯಕ್ಕಲ್ಲ. ವೈಯಕ್ತಿಕವಾಗಿ ಅವರ ಬೆಂಬಲಕ್ಕೆ ಇದ್ದೇನೆ. ಆದರೆ, ನಾನು ಇಂದು ಯಾವುದೇ ನಿಲುವು ತೆಗೆದುಕೊಂಡಿಲ್ಲ. ಓರ್ವ ವ್ಯಕ್ತಿ ಪರ ಬಂದಿದ್ದೇನೆ. ಒಂದು ವ್ಯಕ್ತಿಗೆ ನಾನು ಬೆಂಬಲ ಕೊಡುತ್ತೇನೆ ಎಂದ ಮಾತ್ರಕ್ಕೆ ಅವರ ಪರವಿರುವ ಎಲ್ಲರಿಗೂ ಪ್ರಚಾರ ಮಾಡುತ್ತೇನೆ ಎಂದಲ್ಲ. ಆ ರೀತಿ ಮಾತುಕತೆಯೂ ನಡೆಸಿಲ್ಲ. ಸಿಎಂಗೆ ಬೇಕಾದಂತ ಕೆಲ ವ್ಯಕ್ತಿಗಳ ಪರ ಮಾತ್ರ ಪ್ರಚಾರ ಮಾಡಲಿದ್ದೇನೆ. ಯಾರ ಯಾರ ಪರ ಪ್ರಚಾರ ಎಂದು ಇನ್ನು ಮಾತುಕತೆ ಆಗಿಲ್ಲ. ಆದರೆ, ಸಿಎಂ ಹೇಳಿದ ಕೆಲವರ ಪರ ಪ್ರಚಾರ ಮಾಡಲಿದ್ದೇನೆ ಎಂದರು.
ಪಕ್ಷದ ವೇದಿಕೆ ಎಂದು ಇಲ್ಲಿಗೆ ಬಂದಿಲ್ಲ. ವ್ಯಕ್ತಿ ಪರವಾಗಿ ಬಂದಿದ್ದೇನೆ. ಅಂಬರೀಶ್ ಮಾಮ ಬಂದಾಗ ಅವರ ಹೆಸರನ್ನೂ ತೆಗೆದುಕೊಂಡಿದ್ದೇನೆ. ಈಗ ಬೊಮ್ಮಾಯಿ ಪರ ನಿಲ್ಲುತ್ತಿದ್ದೇನೆ. ನನ್ನ ಕಷ್ಟದ ಜೀವನದಲ್ಲಿ ಒಂದು ಬೆರಳು ಹಿಡಿದು ಸಹಕರಿಸಿದ್ದರೂ ಅವರು ಯಾವ ಪಕ್ಷದಲ್ಲಿದ್ದರೂ ಅವರ ಬೆಂಬಲಕ್ಕೆ ನಾನು ಸಿದ್ದ. ನನ್ನ ಕಷ್ಟದ ಸಮಯದಲ್ಲಿ ಬೊಮ್ಮಾಯಿ ಬೆಂಬಲಕ್ಕೆ ಬಂದಾಗ ನಾನು ಚಿಕ್ಕವನು. ಯಾವ ಪಕ್ಷ ಎಂದು ನೋಡಿಲ್ಲ, ಬೆಂಬಲ ಕೊಟ್ಟಿದ್ದರು. ಹಾಗಾಗಿ, ಇಂದು ನಾನು ಅವರ ಬೆಂಬಲಕ್ಕೆ ನಿಲ್ಲುತ್ತಿದ್ದೇನೆ ಎಂದರು.
ಇದೇ ವೇಳೆ ಪ್ರಕಾಶ್ ರಾಜ್ ಟ್ವೀಟ್ ಕುರಿತು ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡದ ಸುದೀಪ್, ಪ್ರಕಾಶ್ ರಾಜ್ ತುಂಬಾ ಒಳ್ಳೆಯ ಕಲಾವಿದರು, ಅವರ ಜೊತೆ ರನ್ನ ಚಿತ್ರ ಮಾಡಿದ್ದೇನೆ. ಮತ್ತೊಂದು ಸಿನಿಮಾದ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾ ವಿಷಯಾಂತರ ಮಾಡಿದರು.
ರಾಜಕೀಯ ಪ್ರವೇಶ ಇಲ್ಲ: ನಾನು ರಾಜಕೀಯ ಪ್ರವೇಶ ಮಾಡುತ್ತಿಲ್ಲ. ನನ್ನ ಅಭಿಮಾನಿಗಳ ನಿರೀಕ್ಷೆ ಕೂಡ ಅದೇ ಆಗಿದೆ. 27 ವರ್ಷದ ಶ್ರಮ ಇದೆ. ಇಂದು ತೆಗೆದುಕೊಂಡ ನಿಲುವು ಮಾನವೀಯತೆಯ ನಿಲುವು. ರಾಜಕೀಯ ಪಕ್ಷ ಸೇರುತ್ತಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಹಣಕ್ಕಾಗಿ ಪ್ರಚಾರ ಮಾಡುತ್ತಿಲ್ಲ: ಬೊಮ್ಮಾಯಿ ಪರ ಹಣ ಪಡೆಯದೆ ಪ್ರಚಾರ ಮಾಡುತ್ತೀರಾ ಎನ್ನುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸುದೀಪ್, ನನಗಿನ್ನು ಸಿನಿಮಾದಲ್ಲೇ ತುಂಬಾ ಜನ ಹಣ ಕೊಡಬೇಕಿದೆ. ಅದನ್ನು ಕೊಡಿಸಿಬಿಡಿ ಸಾಕು ಎಂದು ಹಾಸ್ಯ ಚಟಾಕಿ ಹಾರಿಸುತ್ತಾ, ನನಗೆ ಬೇರೆ ಕಡೆ ಹಣ ಸಂಪಾದನೆ ಮಾಡುವ ಶಕ್ತಿ ಇಲ್ಲವಾ? ಇಲ್ಲಿಗೇ ಬರಬೇಕೇ? ನಾನು ಇಲ್ಲಿ ಹಣ ಪಡೆದು ಪ್ರಚಾರಕ್ಕೆ ಬರುತ್ತಿಲ್ಲ. ಬೊಮ್ಮಾಯಿ ಅವರಿಗೆ ನನ್ನ ಸಂಪೂರ್ಣ ಬೆಂಬಲ ಕೊಡುತ್ತಿದ್ದೇನೆ ಎಂದರು.
ಬೊಮ್ಮಾಯಿ ಕರೆದರೂ ಎಂದು ಪ್ರಚಾರಕ್ಕೆ ಬರುತ್ತಿದ್ದೇನೆಯೇ ಹೊರತು ಚುನಾವಣೆಗೆ ನಿಲ್ಲುವ ಆಲೋಚನೆ ಇಲ್ಲ. ಅನಿವಾರ್ಯ ಸಂದರ್ಭ ಎದುರಾಯಿತು ಎನ್ನುವ ಕಾರಣಕ್ಕೆ ಚುನಾವಣೆಗೆ ನಿಲ್ಲುವುದಿಲ್ಲ. ಒಂದು ವೇಳೆ ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿದಲ್ಲಿ ಅದನ್ನು ನೇರವಾಗಿಯ ಹೇಳಿಯೇ ಚುನಾವಣೆಗೆ ನಿಲ್ಲುತ್ತೇನೆ. ಅನಿವಾರ್ಯ ಎನ್ನುವ ಕಾರಣಕ್ಕೆ ಚುನಾವಣೆಗೆ ನಿಲ್ಲಲ್ಲ ಎಂದು ಸುದೀಪ್ ಇದೇ ವೇಳೆ ಸ್ಪಷ್ಟಪಡಿಸಿದರು.
ಡಿಕೆ ಶಿವಕುಮಾರ್ ಆತ್ಮೀಯರು, ಅವರು ಕೂಡ ಪ್ರಚಾರಕ್ಕೆ ಕರೆದಿದದರು. ಈ ರೀತಿ ನಟರನ್ನು ಕರೆತರಲು ಆಹ್ವಾನ ನೀಡಿ ಪ್ರಯತ್ನ ನಡೆಸುವುದು ತಪ್ಪಲ್ಲ ಎಂದ ಸುದೀಪ್, ನಾನು ದೇಶದ ನಾಗರಿಕ, ತೆರಿಗೆ ಪಾವತಿ ಮಾಡುತ್ತಿದ್ದೇನೆ. ಅಭಿವೃದ್ಧಿಗೆ ಬೆಂಬಲ ನೀಡುತ್ತೇನೆ. ಇಂದು ದೇಶ ಅಭಿವೃದ್ಧಿ ಆಗುತ್ತಿದೆ. ನಾನು ಅದಕ್ಕೆ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಸರ್ಕಾರವನ್ನು ಹಾಡಿ ಹೊಗಳಿದರು.
ಕಮೀಷನ್ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವ ವಿಚಾರದ ಬಗ್ಗೆ ಮಾತನಾಡಬಹುದು. ಪ್ರತಿಯೊಬ್ಬರೂ ಇಲ್ಲಿನ ಕಾನೂನು ನಂಬುತ್ತೇವೆ. ಇಲ್ಲಿ ಆ ರೀತಿ ಭ್ರಷ್ಟಾಚಾರ ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳಲಿದೆ. ನಾವು ಅದನ್ನು ಮಾತನಾಡಬಾರದು. ಆದರೆ, ಒಳ್ಳೆಯದರ ಪರ ನಿಂತಿದ್ದೇನೆ ಅಷ್ಟೆ ಎಂದು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸುದೀಪ್ ಪ್ರತಿಕ್ರಿಯೆ ನೀಡಿದರು.
ಸಿಎಂ ಪರ ಬೆಂಬಲಕ್ಕೆ ಯಾರ ಒತ್ತಡ ಇಲ್ಲ. ಐಟಿ ಇಡಿ ದಾಳಿಯ ಭಯಕ್ಕೆ ಈ ರೀತಿ ಬೆಂಬಲ ನೀಡುತ್ತಿದ್ದೇನೆ ಎನ್ನುವುದು ಸರಿಯಲ್ಲ. ಈಗಾಗಲೇ ಐಟಿ ದಾಳಿ ಆಗಿದ್ದಾಯಿತು, ಹೋಯಿತು. ಒತ್ತಡದ ಮೇಲೆ ಬೆಂಬಲಕ್ಕೆ ಬರುವ ವ್ಯಕ್ತಿ ನಾನಲ್ಲ. ಪ್ರೀತಿಯಿಂದ ಬಂದಿದ್ದೇನೆ ಎಂದರು.
ನನ್ನ ಬೆಂಬಲಿಸಿದ್ದಾರೆ ಎಂದರೆ ಬಿಜೆಪಿಗೆ ಬೆಂಬಲ ಎಂದೇ ಅರ್ಥ: ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸುದೀಪ್ ಮತ್ತು ನಮ್ಮ ಸಂಬಂಧಕ್ಕೆ ಗೌರವ ಕೊಡಿ. ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಆದರೆ, ನನಗೆ ಬೆಂಬಲ ಕೊಡಲು ಬಂದಿದ್ದಾರೆ. ನನಗೆ ಬೆಂಬಲ ಎಂದರೆ ಪಕ್ಷಕ್ಕೆ ಬೆಂಬಲ ಎಂದೇ ಅರ್ಥ ಎಂದು ಸ್ಪಷ್ಟಪಡಿಸಿದರು.
ನಾನು ಎರಡು ಮೂರು ಬಾರಿ ಸುದೀಪ್ ಜೊತೆ ಮಾತನಾಡಿದ್ದೇನೆ. ಪಕ್ಷ ಸೇರದೇ ಇದ್ದರೂ ಪ್ರಚಾರದ ಅಗತ್ಯ ಇದೆ ಎಂದಿದ್ದೆ. ಅದಕ್ಕೆ ನನ್ನ ಪರ ಪ್ರಚಾರ ಮತ್ತು ನಾನು ಹೇಳಿದಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಹಾಗದರೆ ನನ್ನ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎಂದೇ ಅರ್ಥ ಎಂದರು.
ಸುದೀಪ್ ಹಣ ಪಡೆದು ಪ್ರಚಾರ ಮಾಡುತ್ತಾರೋ ಇಲ್ಲವೋ ಎನ್ನುವ ಚರ್ಚೆ ಅನಗತ್ಯ ಎಂದ ಸಿಎಂ, ಎಲ್ಲವನ್ನೂ ಕಮರ್ಷಿಯಲ್ ಆಗಿ ನೋಡಬಾರದು. ಮಾನವೀಯತೆಯಿಂದ ಅವರು ನನ್ನ ಪರ ಬೆಂಬಲಕ್ಕೆ ಬಂದಿದ್ದೇನೆ ಎಂದಿದ್ದಾರೆ ಎಂದರು.
ಇಂದಿನ ಸುದ್ದಿಗೋಷ್ಟಿ ಪಕ್ಷದಿಂದ ಆಯೋಜನೆ ಮಾಡಿದ ಸುದ್ದಿಗೋಷ್ಟಿಯಲ್ಲ, ನಾನು ಮುಖ್ಯಮಂತ್ರಿಯಾಗಿ ಸುದ್ದಿಗೋಷ್ಟಿ ಕರೆದಿದ್ದೇನೆ. ನನ್ನ ಮೇಲಿನ ಗೌರವದಿಂದ ಸುದೀಪ್ ನಿಲುವು ತೆಗೆದುಕೊಂಡಿದ್ದಾರೆ. ನಾನು ಎಲ್ಲಿ ಹೇಳುತ್ತೇನೋ ಅಲ್ಲಿ ಪ್ರಚಾರ ಮಾಡಲಿದ್ದಾರೆ. ಇದು ವೈಯಕ್ತಿಕ ನಿರ್ಧಾರ. ಪಕ್ಷದ ನಿರ್ಧಾರ ಆಗಿದ್ದರೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡುತ್ತಿದ್ದೆ ಸಿಎಂ ಸ್ಪಷ್ಟಪಡಿಸಿದರು.
ಸುದೀಪ್ ಅವರ ನಿರ್ಣಯವನ್ನು ಸ್ವಾಗತ ಮಾಡಲಿದ್ದೇನೆ. ಸುದೀಪ್ ಜನಪ್ರಿಯ ನಟ. ಹಾಗಾಗಿ, ಪ್ರಚಾರದ ಬಗ್ಗೆ ಯೋಜನೆಗಳನ್ನು ಮಾಡಲಿದ್ದೇವೆ. ಸುದೀಪ್ ಅಭಿಮಾನಿಗಳನ್ನೂ ದೃಷ್ಟಿಯಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಾಗುತ್ತದೆ. ಸುದೀಪ್ ನಮ್ಮ ಜೊತೆ ಸೇರಿದ್ದು ಪಕ್ಷಕ್ಕೆ, ಪ್ರಚಾರಕ್ಕೆ ದೊಡ್ಡ ಶಕ್ತಿ ಬಂದಿದೆ. ಸುದೀಪ್ ತಂದೆ ತಾಯಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸುದೀಪ್ ಸಮಯ, ಗೌರವ ಎರಡನ್ನೂ ಗಮನದಲ್ಲಿರಿಸಿಕೊಂಡು ಪ್ರಚಾರ ಕಾರ್ಯವನ್ನು ಆಯೋಜನೆ ಮಾಡಲಾಗುತ್ತದೆ. ಸುದೀಪ್ ಬಿಜೆಪಿಗೆ ಬರುತ್ತಾರೆ ಎನ್ನುವ ಸುದ್ದಿಯೇ ರಾಜ್ಯಾದ್ಯಂತ ವಿದ್ಯುತ್ ಸಂಚಲನ ಮೂಡಿಸಿತ್ತು. ಇದೇ ಅವರ ಶಕ್ತಿಗೆ ನಿದರ್ಶನ ಹಾಗಾಗಿ ನಾವು ಸುದೀಪ್ ಅವರ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ಸುದೀಪ್ ಪಕ್ಷ ಸೇರ್ಪಡೆ ಬಗ್ಗೆ ಬಿಜೆಪಿ ಹರಡುತ್ತಿರುವುದು ಸುಳ್ಳು ಸುದ್ದಿ.. ಪ್ರಕಾಶ್ ರಾಜ್ ಟ್ವೀಟ್