ಗಂಗಾವತಿ: ಯುಗಾದಿಯಂದು ರಥ ಎಳೆದು ಸಂಭ್ರಮಿಸಿದ ನೂರಾರು ಮಹಿಳೆಯರು - women pulled Ratha
Published : Apr 9, 2024, 10:40 PM IST
ಗಂಗಾವತಿ : ಬಹುತೇಕ ದೇಗುಲಗಳಲ್ಲಿ ನಡೆಯುವ ರಥೋತ್ಸವ, ಉಚ್ಛ್ರಾಯವನ್ನು ಪುರುಷರು ಎಳೆಯುವುದು ರೂಢಿ. ಆದರೆ, ತಾಲೂಕಿನ ಕೇಸರಹಟ್ಟಿ ಗ್ರಾಮದ ತಾಯಮ್ಮ ದೇವಸ್ಥಾನದಲ್ಲಿ ಯುಗಾದಿಯ ಹೊಸ ವರ್ಷದಂದು ನಡೆಯುವ ರಥೋತ್ಸವಕ್ಕೆ ಮಹಿಳೆಯರೇ ಮುಂದಾಳತ್ವ ವಹಿಸಿಕೊಳ್ಳುವ ಭಕ್ತಿ ಮೆರೆದಿದ್ದಾರೆ.
ಮಂಗಳವಾರ ಸಂಜೆ ನಡೆದ ರಥೋತ್ಸವದಲ್ಲಿ ಗ್ರಾಮದ ನಾನಾ ಸಮುದಾಯದ ಮಹಿಳಾ ಪ್ರಮುಖರು ತಾಯಮ್ಮ ದೇವಾಯಲದಿಂದ ಪಾದಗಟ್ಟೆವರೆಗೆ ಮತ್ತು ಪಾದಗಟ್ಟೆಯಿಂದ ಪುನಃ ದೇಗುಲದ ವರೆಗೆ ರಥೋತ್ಸವ ಎಳೆದು ಗಮನ ಸಳೆದರು. ಗ್ರಾಮದ ಎಲ್ಲ ಸಮುದಾಯದ ಪುರುಷರು ಮಹಿಳೆಯರು ಎಳೆಯುವ ರಥೋತ್ಸವವನ್ನು ಕಣ್ತುಂಬಿಕೊಂಡರು.
ಈ ಬಗ್ಗೆ ಮಾತನಾಡಿದ ಗ್ರಾಮದ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಮುದೇಗೌಡ ಮಾಲಿಪಾಟೀಲ್, ಕಳೆದ ಹಲವು ವರ್ಷದಿಂದ ಯುಗಾದಿ ಹಬ್ಬದ ದಿನ ನಮ್ಮೂರಿನ ಮಹಿಳೆಯರೇ ರಥೋತ್ಸವ ಎಳೆಯುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದೇವೆ. ಗ್ರಾಮದಲ್ಲಿ ಮೊದಲು ತಾಯಮ್ಮ ದೇವಸ್ಥಾನವನ್ನು ಮಹಿಳೆಯರೇ ನಿರ್ಮಾಣ ಮಾಡಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬಂದಿದ್ದಾರೆ. ಕಳೆದ ಐದಾರು ವರ್ಷದಿಂದ ರಥ ನಿರ್ಮಾಣ ಮಾಡಿದ ಬಳಿಕ ಮಹಿಳೆಯರೇ ರಥೋತ್ಸವ ಎಳೆಯುವುದು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದ್ದೇವೆ ಎಂದರು.
ಇದನ್ನೂ ಓದಿ : ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಬ್ರಹ್ಮರಥೋತ್ಸವ; ಹಂಬಿನಿಂದ ತೇರು ಎಳೆದ ಭಕ್ತರು - Himavad Gopalaswamy Hills