ದಾವಣಗೆರೆ: ಕಾಲೇಜಿನ ಅಡುಗೆಮನೆಗೆ ನುಗ್ಗಿ ಪಾತ್ರೆಯಲ್ಲಿ ಅವಿತಿದ್ದ ನಾಗರಹಾವು! - Cobras Rescued
Published : Sep 23, 2024, 6:33 PM IST
ದಾವಣಗೆರೆ: ನಾಗರಹಾವೊಂದು ಕಾಲೇಜಿನ ಅಡುಗೆ ಮನೆಯಲ್ಲಿನ ಪಾತ್ರೆಯಲ್ಲಿ ಅವಿತು ಕೂತಿದ್ದ ಘಟನೆ ಸೋಮವಾರ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ಬಳಿಯ ಜೈನ್ ಕಾಲೇಜಿನಲ್ಲಿ ಹಾವು ಕಂಡುಬಂದಿದೆ.
ನಾಗರಹಾವನ್ನು ಕಂಡ ವಿದ್ಯಾರ್ಥಿಗಳು ಆತಂಕದಿಂದ ಹೊರಗೆ ಓಡಿ ಬಂದಿದ್ದರು. ಪಾತ್ರೆಯಲ್ಲಿ ಕೂತಿದ್ದ ಹಾವನ್ನು ನೋಡಿದ ಅಡುಗೆ ಸಿಬ್ಬಂದಿಯೂ ಕೂಡ ಕೆಲಕಾಲ ಭಯಭೀತರಾಗಿದ್ದರು. ಬಳಿಕ ಕಾಲೇಜಿನ ಸಿಬ್ಬಂದಿ ಸ್ನೇಕ್ ಬಸವರಾಜ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಬಸವರಾಜ್ ಹಾವನ್ನು ಸೆರೆಹಿಡಿದು ರಕ್ಷಿಸಿದ್ದಾರೆ. ನಾಲ್ಕು ಅಡಿ ಉದ್ದದ ನಾಗರಹಾವು ಇದಾಗಿದೆ. ಹಾವನ್ನು ಬಸವರಾಜ್ ರಕ್ಷಣೆ ಮಾಡಿದ ಬಳಿಕ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟರು.
ಇದಲ್ಲದೇ, ದಾವಣಗೆರೆ ನಗರದ ಆರ್ಟಿಓ ಕಚೇರಿ ಬಳಿಯ ಮಲ್ಲೇಶಪ್ಪ ಎಂಬವರ ಮನೆಯಲ್ಲಿ ಕೂಡ ನಾಗರಹಾವು ಬೀಡುಬಿಟ್ಟಿತ್ತು. ಇಟ್ಟಿಗೆಗಳಲ್ಲಿ ಅವಿತುಕೊಂಡಿದ್ದ ನಾಗಪ್ಪನನ್ನು ಸ್ನೇಕ್ ಬಸವರಾಜ್ ಅವರೇ ರಕ್ಷಣೆ ಮಾಡಿದ್ದಾರೆ. ಒಂದೇ ದಿನ ಎರಡು ಹಾವುಗಳನ್ನು ರಕ್ಷಣೆ ಮಾಡುವಲ್ಲಿ ಬಸವರಾಜ್ ಯಶಸ್ವಿಯಾಗಿದ್ದಾರೆ. ಹಾವುಗಳನ್ನು ಆನಗೋಡು ಕಾಡಿಗೆ ಬಿಡುವುದಾಗಿ ಬಸವರಾಜ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.