ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ; ಕಣ್ತುಂಬಿಕೊಂಡ ಭಕ್ತಸಾಗರ- ವಿಡಿಯೋ ಸ್ಟೋರಿ
Published : Oct 17, 2024, 1:58 PM IST
ಮಡಿಕೇರಿ: ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ತುಲಾ ಸಂಕ್ರಮಣದ ವಿಶೇಷ ಶುಭ ದಿನದಂದು ಕಾವೇರಿಯ ಪವಿತ್ರ ತೀರ್ಥೋದ್ಭವವಾಗಿದೆ. ಭಾಗಮಂಡಲದ ತಲಕಾವೇರಿಯಲ್ಲಿ ಇಂದು(ಅ.17) ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ತಾಯಿ ದರ್ಶನ ನೀಡಿದ್ದಾಳೆ.
ಬ್ರಹ್ಮಗಿರಿ ತಪ್ಪಲಿನ ಕಾವೇರಿ ಕ್ಷೇತ್ರದಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ತೀರ್ಥ ಸ್ವರೂಪಿಣಿಯಾದ ಕಾವೇರಿ ಮಾತೆಯ ತೀರ್ಥೋದ್ಭವಾಗಿದ್ದು, ಸಾವಿರಾರು ಭಕ್ತರು ಈ ಕ್ಷಣವನ್ನು ಕಣ್ತುಂಬಿಕೊಂಡರು. ತೀರ್ಥೋದ್ಭವಕ್ಕೆ ನಾಡಿನಾದ್ಯಂತ ಆಗಮಿಸಿದ ಭಕ್ತರು ಭಕ್ತಿ-ಭಾವದಿಂದ ಜೈ ಕಾವೇರಿ ಮಾತೆ ಎಂದು ಘೋಷಣೆ ಕೂಗಿ, ತೀರ್ಥ ಕೊಳದಲ್ಲಿ ಸ್ಥಾನ ಮಾಡಿದರು.
ತೀರ್ಥೋದ್ಭವಕ್ಕೂ ಮುನ್ನ ಬ್ರಹ್ಮಕುಂಡಿಕೆಯಲ್ಲಿ ಬಳಿ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಸಾಂಪ್ರದಾಯಿಕ ಉಡುಗೆಯಲ್ಲಿ ಆರತಿ ಹಿಡಿದು ಆಗಮಿಸಿದ್ದ ಕೊಡಗಿನ ಮಹಿಳೆಯರ, ಕಾವೇರಿ ಮಾತೆಗೆ ಆರತಿ ಬೆಳಗಿ ಸ್ವಾಗತಿಸಿದರು. ಭಾಗಮಂಡಲ-ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು, ತೀರ್ಥೋಧ್ಬವದ ಹಿನ್ನೆಲೆ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಸಾಗರೋಪಾದಿಯಲ್ಲಿ ಭಕ್ತಾಧಿಗಳು ಹರಿದು ಬರುತ್ತಿದ್ದಾರೆ.
ಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಸ್ಥಳೀಯ ಶಾಸಕರಾದ ಎ.ಎಸ್ ಪೊನ್ನಣ್ಣ, ಡಾ.ಮಂತರ್ ಗೌಡ, ಸುಜಾಕುಶಾಲಪ್ಪ, ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಎಎಸ್‌ಪಿ ಸುಂದರ್ ರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಇದನ್ನೂ ಓದಿ: Watch..: ಅರ್ಜುನನಿದ್ದ ಬಳ್ಳೆ ಶಿಬಿರಕ್ಕೆ ಮಹೇಂದ್ರ ಎಂಟ್ರಿ: ಮಾಜಿ ಕ್ಯಾಪ್ಟನ್ ಸ್ಥಾನ ತುಂಬಲು ರೆಡಿ