'ರಾಮಲಲ್ಲಾನ ಬಗ್ಗೆ ಹೇಳಲು ಪದಗಳೇ ಇಲ್ಲ': ಸೋನು ನಿಗಮ್, ಅನುರಾಧ ಪೌಡ್ವಾಲ್ ಕಣ್ಣಂಚಲಿ ನೀರು - Ram Mandir inauguration
Published : Jan 22, 2024, 5:20 PM IST
ಅಯೋಧ್ಯೆ: ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ಸೋನು ನಿಗಮ್ ಹಾಗೂ ಅನುರಾದಾ ಪೌಡ್ವಾಲ್ ಭಾಗಿಯಾಗಿದ್ದು, ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ತಮ್ಮ ಅದ್ಭುತ ಹಾಡುಗಳಿಂದ ಭಕ್ತಿ ಭಾವ ಹರಿಸಿದರು. ರಾಮ ಜನ್ಮಭೂಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ವೀಕ್ಷಿಸಿದ ಈ ಇಬ್ಬರು ಗಾಯಕರಲ್ಲಿ ಮಾಧ್ಯಮದವರು ಮಾತನಾಡಿಸಿದರು. ಈ ವೇಳೆ ಇಬ್ಬರೂ ತಮ್ಮಲ್ಲಿ ಹೇಳಲು ಮಾತುಗಳಿಲ್ಲ, ತಾವು ಮೂಕವಿಸ್ಮಿತರಾಗಿದ್ದೇವೆ ಎಂದು ಹೇಳಿದ್ದಾರೆ.
ಗಾಯಕ ಸೋನು ನಿಗಮ್ ಅವರು ಅಕ್ಷರಶಃ ಭಾವುಕರಾಗಿದ್ದು, ಕಣ್ಣಿನಂಚುಗಳು ಒದ್ದೆಯಾಗುವ ಮೂಲಕ ಸೋನು ನಿಗಮ್ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ, ಮಾಧ್ಯಮಗಳಿಗೆ "ನಾನು ಮೂಕನಾಗಿದ್ದೇನೆ. ಮಾತುಗಳೇ ಬರುತ್ತಿಲ್ಲ. ನಾನು ಈ ಕ್ಷಣ ಇದನ್ನಷ್ಟೇ ಹೇಳಲು ಸಾಧ್ಯ" ಎಂದು ತಮ್ಮ ಕಣ್ಣಂಚಲ್ಲಿ ಇಳಿದ ನೀರನ್ನು ತೋರಿಸಿದ್ದಾರೆ.
ಅಂತೆಯೇ ಹಿರಿಯ ಗಾಯಕಿ ಅನುರಾಧಾ ಪೌಡ್ವಾಲ್ ಕೂಡ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಭಾವನೆಗಳನ್ನು ಹಂಚಿಕೊಂಡರು. "ನನಗೆ ಮಾತನಾಡಲು ಪದಗಳೇ ಇಲ್ಲ. ದೇವರೇ ನಿರ್ಧರಿಸಿರುವಾಗ ಯಾರೂ ಅವನನ್ನು ಬರದಂತೆ ತಡೆಯಲು ಸಾಧ್ಯವಿಲ್ಲ" ಎಂದು ದೇಶದ ಜನತೆ ಹಾಗೂ ರಾಮನ ಭಕ್ತರಿಗೆ, ರಾಮ ಮಂದಿರ ಉದ್ಘಾಟನೆಯ ಶುಭಾಶಯಗಳನ್ನು ತಿಳಿಸಿದರು.
ಗಾಯಕ ಹರಿಹರನ್ ಕೂಡ ಸಮಾರಂಭದಲ್ಲಿ ಭಾಗಿಯಾದ ನಂತ ಮಾಧ್ಯಮಗಳ ಜೊತೆ ಇದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರಾಮ್ ಲಲ್ಲಾ ವಿಗ್ರಹವನ್ನು ವಿವರಿಸಿದ ಅವರು "ಇದು ವೆಂಕಟೇಶ್ವರನನ್ನು ನೆನಪಿಸುತ್ತದೆ. ಎಲ್ಲ ದೇವರುಗಳು ಒಂದೇ ಎಂಬ ಸಿದ್ಧಾಂತವನ್ನು ಒತ್ತಿ ಹೇಳುತ್ತದೆ." ಎಂದು ಹೇಳಿದರು.
ಇದನ್ನೂ ನೋಡಿ: ಮಂತ್ರಾಲಯದಲ್ಲಿ ಅದ್ಧೂರಿಯಾಗಿ ಜರುಗಿದ ಮೂಲ ರಾಮನ ಶೋಭಾಯಾತ್ರೆ: ವಿಡಿಯೋ