ಉಡುಪಿ: ತೊಟ್ಟಂ ಅನ್ನಮ್ಮ ಮೊಂತಿ ಫೆಸ್ಟ್: 'ಸಾವಯವ ತರಕಾರಿ ಸಂತೆ' - Organic Vegetable Mela - ORGANIC VEGETABLE MELA
Published : Sep 7, 2024, 8:26 PM IST
ಉಡುಪಿ: ಗಣೇಶ ಚತುರ್ಥಿ, ಕ್ರೈಸ್ತರ ಮೊಂತಿ ಫೆಸ್ಟ್, ಮುಸ್ಲಿಂರ ಈದ್ ಮಿಲಾದ್ ಹಬ್ಬಗಳು ಸಾಲು ಸಾಲಾಗಿ ಬಂದಿವೆ. ಹಬ್ಬಗಳ ಹಿನ್ನೆಲೆಯಲ್ಲಿ ಸ್ಥಳೀಯ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಮೊಂತಿ ಫೆಸ್ಟ್ ಅಂಗವಾಗಿ ಸೆ.6, 7ರಂದು ಎರಡು ದಿನಗಳ ಮಾರಾಟ ಮೇಳ ನಡೆಯಿತು. ರೈತರು ತಮ್ಮ ತೋಟದಲ್ಲಿ ಬೆಳೆದ ತರಕಾರಿಗಳನ್ನು ತಂದು ಮಾರಾಟ ಮಾಡಲು 'ಸಾವಯವ ತರಕಾರಿ ಸಂತೆ' ಆಯೋಜಿಸಲಾಗಿತ್ತು.
ತೊಟ್ಟಂ, ತೆಂಕನಿಡಿಯೂರು, ಬಡಾನಿಡಿಯೂರು, ಮಲ್ಪೆ ಭಾಗದ ರೈತರು ಸಾವಯವ ಗೊಬ್ಬರದಿಂದ ಬೆಳೆದ ಬೆಂಡೆಕಾಯಿ, ಹೀರೆ, ಹರಿವೆ, ಅಲಸಂದೆ, ಬಸಳೆ, ಇತರ ತರಕಾರಿಗಳನ್ನು ತಂದು ಮಾರಾಟಕ್ಕಿಟ್ಟಿದ್ದರು. ತರಕಾರಿ ಸಂತೆಗೆ ಹಲವರು ಭೇಟಿ ನೀಡಿ, ಶುದ್ಧ, ಸಾವಯವ ತರಕಾರಿ ಖರೀದಿಸಿದರು. ಯಾವುದೇ ಮಧ್ಯವರ್ತಿಗಳು, ದಲ್ಲಾಳಿಗಳ ಕಿರಿಕಿರಿ ಇಲ್ಲದೇ, ರೈತರು ನೇರವಾಗಿ ತಮ್ಮ ತೋಟದಲ್ಲಿನ ತರಕಾರಿಗಳನ್ನು ಮಾರಿದರು.
ತೊಟ್ಟಂ ದೇವಾಲಯದ ಕಥೊಲಿಕ್ ಸಭಾ ಸಂಘಟನೆಯ ವಿಶಿಷ್ಟ ಪ್ರಯತ್ನ ಯಶಸ್ವಿಯಾಯಿತು. ಸ್ಥಳೀಯ ಸರ್ವಧರ್ಮ ಸಮನ್ವಯ ಸಮಿತಿಯೂ ಕೂಡ ಇದಕ್ಕೆ ಕೈಜೋಡಿಸಿತ್ತು. ಅಲ್ಲದೆ, ತರಕಾರಿಗಳನ್ನು ಕೊಂಡೊಯ್ಯಲು ಕಡ್ಡಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ತರಲು ಸೂಚಿಸಿರುವುದು ಮತ್ತೊಂದು ವಿಶೇಷ.